ಬೆಟ್ಟದಪುರದಲ್ಲಿ ಶ್ರೀ ಭ್ರಮರಾಂಬ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೊತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತ್ತು. 
ಜಿಲ್ಲೆ

ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೊತ್ಸವ ಸಂಪನ್ನ

ಬೆಟ್ಟದಪುರ: ಉಘೇ ಮಲಯ್ಯ, ಉಘೇ ಗಿರಿಜಾಮ್ಮ, ಉಘೇ ಮಲ್ಲಿಕಾರ್ಜುನ ಎಂಬ ಸಾವಿರಾರು ಭಕ್ತರ ನಿಷ್ಕಲ್ಮಶ ಮನಸ್ಸಿನ ಜೈಕಾರದೊಂದಿಗೆ ಗುರುವಾರ ಬೆಟ್ಟದಪುರದಲ್ಲಿ ಶ್ರೀ ಭ್ರಮರಾಂಬ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೊತ್ಸವವು ವಿಜೃಂಭಣೆಯಿಂದ ಗುರುವಾರ ಸಂಪನ್ನಗೊಂಡಿತು.

ರಥೋತ್ಸವದ ಹಿನ್ನೆಲೆಯಲ್ಲಿ ಮೂರು ರಥಗಳಿಗೂ ವಿವಿಧ ಪುಷ್ಪಗಳಿಂದ ಹಾಗೂ ಕೇಸರಿ ಸೇರಿದಂತೆ ಹಲವು ಬಗೆಯ ಬಣ್ಣ ಬಣ್ಣಗಳ ಬಾವುಟಗಳಿಂದ ಅಲಂಕೃತಗೊಂಡ ರಥಗಳ ಮೇಲೆ ಕ್ರಮವಾಗಿ ಬೆಳ್ಳಿಬಸಪ್ಪ, ಗಣಪತಿ ಹಾಗೂ ಗಿರಿಜಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಸಲ್ಲಿದ ಶುಭಗಳಿಗೆಯಲ್ಲಿ ಗಣ್ಯರು ಹಾಗೂ ಭಕ್ತಾದಿಗಳು ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಬಳಿಕ ವಿವಿಧೆಡೆಯಿಂದ ಆಗಮಿಸಿದ ಭಕ್ತರೆಲ್ಲ ಒಟ್ಟಾಗಿ ಸೇರಿ ಮೊದಲು ಬೆಳ್ಳಿ ಬಸಪ್ಪ, ನಂತರ ಗಣಪತಿ ಮತ್ತು ಕಡೆಯಲ್ಲಿ ಗಿರಿಜಮ್ಮ ಮಲ್ಲಯ್ಯ ರಥಗಳನ್ನು ಒಂದೊಂದಾಗಿ ಜೈಕಾರದೊಂದಿಗೆ ಎಳೆದು ಭಕ್ತಿ ಸಮರ್ಪಣೆ ಮಾಡಿದರು. ನವದಂತಿಗಳು ಹಾಗೂ ಭಕ್ತರು ಹಣ್ಣು-ದವನ ಎಸೆದು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.

ಈ ಬಾರಿ ದಾನಿಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದ್ದ, ಗಣಪತಿ ಪ್ರತಿಷ್ಠಾಪಿಸುವ ನೂತನ ರಥವನ್ನು ಲೋಕಾರ್ಪಣೆ ಮಾಡಲಾಯಿತು. ವಿವಿಧ ಮಠಗಳ ಮಠಾಧೀಶರು ಆಗಮಿಸಿ ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು. ಮಾಜಿ ಶಾಸಕ ಕೆ.ಮಹದೇವ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಸೀಲ್ದಾರ್ ನಿಸರ್ಗಾ ಪ್ರಿಯಾ ಜೆ., ಉಪತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಅಜ್ಮಲ್, ಪಿಡಿಒ ಮಂಜುನಾಥ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ವಿವಿಧ ಸೇವಾ ಸಂಘ, ಸಮಿತಿಗಳು ಬಂದಂತಹ ಭಕ್ತರಿಗೆ ಅನ್ನದಾನ, ಮಜ್ಜಿಗೆ ಪಾನಕ ವಿತರಣೆ ಮಾಡಿದರು. ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಬೆಟ್ಟದ ಬಳಿ ಆರೋಗ್ಯ ಶಿಬಿರವನ್ನು ಆಯೋಜಿಸಿ ಆರೋಗ್ಯ ತಪಾಸಣೆ ಮಾಡಿದರು.