ಜಿಲ್ಲೆ

ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ವಿಜೃಂಭಣೆ

ಕೊಳ್ಳೇಗಾಲ: ತಾಲೂಕಿನ ಕುರುಬನಕಟ್ಟೆ ಶ್ರೀ ಕ್ಷೇತ್ರದ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಭೀಮನಗರ ಬಡಾವಣೆಯ ನೀಲಗಾರರು ತರಿಸಿದ್ದ ಶ್ರೀಸ್ವಾಮಿ ಕಂಡಾಯಗಳನ್ನು ಭಾನುವಾರ ಸಂಜೆ ಪಟ್ಟಣದ ನಗರಸಭೆಯ ಶುದ್ಧ ಕುಡಿಯುವ ಘಟಕದ ವಾಟರ್ ಟ್ಯಾಂಕ್ ಬಳಿ ವಿವಿಧ ಹೂವು, ಹೊಂಬಾಳೆಯೊಂದಿಗೆ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ ಬಡಾವಣೆಗೆ ಟಮಟೆ ಹಾಗೂ ಮಂಗಳವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ಹೂವು ಹೊಂಬಾಳೆ ಅಲಂಕೃತ ಕಂಡಾಯಗಳನ್ನು ಭೀಮನಗರ ಬಡಾವಣೆಯ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಇರಿಸಿ, ನೂರಾರು ಭಕ್ತರ ಸಮ್ಮುಖದಲ್ಲಿ ವಿವಿದ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.

ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಭೀಮನಗರ ಬಡಾವಣೆಯ ದಿಡ್ಡದಕೇರಿಯ ಚೌಡಮ್ಮನಗುಡಿ ಬೀದಿ, ಕಲ್ಲುಬಾವಿ, ಪನ್ನಾಬೀದಿ, ಪಾಲ್ ಚಾವಡಿ ಬೀದಿ, ಬಸವನಗುಡಿ ಬೀದಿ, ಸಿದ್ದಮಲ್ಲಯ್ಯನಕೇರಿ, ಹೊಸ ಬೀದಿ ಹಾಗೂ ಜಿ.ಪಿ.ಮಲ್ಲಪ್ಪಪುರಂನಲ್ಲಿ ಕುರುಬನಕಟ್ಟೆ ಶ್ರೀಕ್ಷೇತ್ರದ ಸಿದ್ದಪ್ಪಾಜಿ ಕಂಡಾಯಗಳನ್ನು ಮೆರವಣಿಗೆ ಮಾಡಲಾಯಿತು.

ಈ ವೇಳೆ ಬಡಾವಣೆಯ ಪ್ರತಿ ಮನೆಗಳಿಂದ ಮಹಿಳೆಯರು ಶ್ರೀಸ್ವಾಮಿ ಕಂಡಾಯಗಳಿಗೆ ಭಕ್ತಿಭಾವದಿಂದ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರಲ್ಲದೇ, ಪುಷ್ಪಾಲಂಕೃತದೊಂದಿಗೆ ಕಂಗೊಳಿಸಿದ ಕಂಡಾಯಗಳಿಗೆ ಕೈ ಮುಗಿದು ಭಕ್ತಿ ಮೆರೆದರು. ಮಧ್ಯಾಹ್ನ 2 ಗಂಟೆ ಬಳಿಕ ಬಡಾವಣೆಯ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಆವರಣದಲ್ಲಿ ಒಂದೂವರೆ ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಂಡಾಯದ ಮೆರವಣಿಗೆ ಹಿನ್ನೆಲೆ ಭೀಮನಗರದ ಪ್ರತಿ ಬೀದಿಗಳನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಮೆರವಣಿಗೆಯಲ್ಲಿ ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ನಟರಾಜು, ಮಹದೇವಸ್ವಾಮಿ, ಪಾಪಣ್ಣ, ವರದರಾಜು, ಆನಂದ್, ಸಿದ್ದರಾಜು, ನಗರಸಭಾ ಸದಸ್ಯ ಎಸ್.ಮಂಜುನಾಥ್, ಶಿವರಾಳ, ಲಿಂಗರಾಜು, ಶಿವರಾಜು, ಮರಯ್ಯ, ಕುಮಾರ್, ನೀಲಗಾರರ ಯಜಮಾನರಾದ ಸಿದ್ದರಾಜು, ಶ್ರೀ ಸಿದ್ದಪ್ಪಾಜಿ ದೇಗುಲದ ತಂಬಡಿ ರಾಚಪ್ಪ, ದೇವರ ಗುಡ್ಡರಾದ ಪ್ರಮೋದ್, ಗಣಿ, ಭಕ್ತಿ, ರಘು, ಶಶಿ, ರಾಜೇಂದ್ರ, ಸುಪ್ರೀತ್, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಉಪಾಧ್ಯಕ್ಷ ಕಿರಣ್, ಸಹ ಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್, ಹಲವು ನಿರ್ದೇಶಕರು ಸೇರಿದಂತೆ ಹಾಗೂ ಇತರರು ಇದ್ದರು.