ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅ.15 ರಿಂದ 25ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿಯ ಹಿಂದಿನ ದಿನ 14ರಂದು ಭಾದ್ರಪದ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ ಶ್ರೀ ಶಾರದೆಗೆ ಆನೇಕ ವಿಧವಾದ ಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಲಿದೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರ ಕಂಗೊಳಿಸಲಿದ್ದಾಳೆ.
ಶ್ರೀ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶಾರದೆಗೆ 15 ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ, 16 ಹಂಸವಾಹಿನಿ, 17 ಮಾಹೇಶ್ವರಿ, 18 ಮಯೂರವಾಹನಾ ಅಲಂಕಾರ, 19 ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ. 20ಕ್ಕೆ ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ, 21ರಂದು ಮೋಹಿನಿ ಅಲಂಕಾರ, 22ಕ್ಕೆ ರಾಜರಾಜೇಶ್ವರಿ ಅಲಂಕಾರ, 23 ರಂದು ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ. 24ರಂದು ವಿಜಯದಶಮಿ, ಗಜಲಕ್ಷ್ಮಿ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ, 25ರಂದು ಗಜಲಕ್ಷ್ಮೀ ಅಲಂಕಾರ, ಶೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಈ ಜಗತ್ತಿನಲ್ಲಿ ಪರಾಶಕ್ತಿ ನಾನೋಬ್ಬಳೇ.. ನನ್ನನ್ನು ಬಿಟ್ಟು ಯಾವುದು ಇಲ್ಲ ಎಂದು ಶ್ರೀದೇವಿ ಮಾಹಾತ್ಮದಲ್ಲಿ ಶ್ರೀ ಶಾರದೆ ತಿಳಿಸಿದಂತೆ ಈ ವಿವಿಧ ಅಲಂಕಾರಗಳು, ಅವತಾರಗಳು ಎಲ್ಲವೂ ಆ ಜಗನ್ಮಾತೆಯದ್ದಾಗಿದೆ. ವಿದ್ಯೆಯನ್ನು ಅನುಗ್ರಹಿಸಿದಾಗ ಸರಸ್ವತಿಯಾಗಿ, ಧನ- ಸಂಪತ್ತನ್ನು ನೀಡುವಾಗ ಮಹಾಲಕ್ಷ್ಮೀಯಾಗಿ, ದುಷ್ಟಸಂಹಾರ ಕಾಲದಲ್ಲಿ ಚಾಮುಂಡಿಯಾಗಿ, ಭಯ ಹೋಗಲಾಡಿಸುವ ದುರ್ಗಾಪರಮೇಶ್ವರಿಯಾಗಿ ಆವತರಿಸಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಜಗದಾಂಬೆಯ ರೂಪಗಳು ಭಿನ್ನವಾಗಿದ್ದರೂ ಚೈತನ್ಯ ಒಂದೇ ಆಗಿರುತ್ತದೆ. ಇಂತಹ ಮಹೋನ್ನತ ವಿಷಯ ಈ ವಿವಿಧ ಅಲಂಕಾರಗಳು ಮಾಡುವ ಹಿನ್ನಲೆಯಲ್ಲಿದೆ.
ನವರಾತ್ರಿ ಸಂದರ್ಭದಲ್ಲಿ ಶ್ರೀ ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ದುರ್ಗಾ ಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀ ಸೂಕ್ತ ಜಪ, ಭವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುವಾಸಿನೀ ಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದ ಸಲುವಾಗಿ ರಾಜಬೀದಿಯಲ್ಲಿ ನಡೆಯುವ ರಥೋತ್ಸವ ವಿಜೃಭಣಿಯಂದ ನಡೆಯಲಿದೆ. ನಾನಾ ಪ್ರಾಂತ್ಯಗಳಿಂದ ಆಗಮಿಸುವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವದಿಂದ ಪುನೀತರಾಗುತ್ತಾರೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಮಧು, ಕೈಟಭ, ಶುಂಭ, ನಿಶುಂಭ ಮೊದಲಾದ ಮಹಾರಾಕ್ಷಸರನ್ನು ಕೊಂದ ಜನನ್ಮಾತೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ. ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ. ಸಂಜೆ 6 ಗಂಟೆಗೆ ಶ್ರೀಮಠದ ಆವರಣದಲ್ಲಿ ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.