ಜಿಲ್ಲೆ

ವಿಜೃಂಭಣೆಯ ಶ್ರೀ ಸೀತಾಳ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿರುವ ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಭಂಡಾರ ತೆಗೆದು, ಮಹಿಳೆಯರು ಗಂಗೆ ತರುವ ಮೂಲಕ ಧಾರ್ಮಿಕ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು. ಮೂರೂರು ಹಾಗೂ ಐದೂರು ನಾಡಿನ ಭಕ್ತರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದರು.

ಹೂವಿನ ತೇರಿಗೆ ಚಾಲನೆ:
ಸೋಮವಾರ ಬೆಳಗ್ಗೆ ಮಲ್ಲಿಕಾರ್ಜುನ ಸ್ವಾಮಿಗೆ ಬಾಸಿಂಗ ಧಾರಣೆ ನಂತರ ದೇವಾಲಯ ಆವರಣದಲ್ಲಿ ಮೆರವಣಿಗೆ ಮಾಡಿ ಭ್ರಮರಾಂಬಿಕಾ ದೇವಿಯೊಂದಿಗೆ ಮುಹೂರ್ತ ನೆರವೇರಿಸಿ ಹೂವಿನ ತೇರು ಎಳೆಯಲಾಯಿತು. ಒಂದು ದಿನ ಮೊದಲೇ ಮುಹೂರ್ತವಾಗಿದೆ ಎಂದು ಬೇಸರದಲ್ಲಿದ್ದ ಮುಳ್ಳಪ್ಪಸ್ವಾಮಿಯನ್ನು ಸಮಾಧಾನಪಡಿಸಿ ಕರೆತಂದು ಎರಡೂ ದೇವರನ್ನು ಹೊಂದಾಣಿಕೆ ಮಾಡಿದ ನಂತರ ಸೀತಾಳ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಮಾಡುವ ಪದ್ಧತಿ ಪುರಾತನ ಕಾಲದಿಂದ ನಡೆದು ಬಂದಿದೆ. ರಥೋತ್ಸವ ವೇಳೆ ಬಾವಿಯಿಂದ ಗಂಗೆ ತಂದು ಓಕುಳಿ ಮೂಲಕ ಭಂಡಾರ ಕಟ್ಟಿ ಜಾತ್ರೆಗೆ ತೆರೆ ಎಳೆಯಲಾಗುವುದು.

12 ಸುತ್ತು ಪ್ರದಕ್ಷಿಣೆ: 
ಮಂಗಳವಾರ ಬೆಳಗ್ಗೆ ದೇವರ ಅಡ್ಡಪಲ್ಲಕ್ಕಿ ಹಾಗೂ ಉದ್ದ ಪಲ್ಲಕ್ಕಿ ಉತ್ಸವಗಳೊಂದಿಗೆ 12 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಭೂತನ ಅಡ್ಡೆ, ಕೆಂಚಪ್ಪರಾಯ, ಚೌಡಮ್ಮ, ಆಂಜನೇಯ, ಹಾಲು ಮಲ್ಲಪ್ಪಸ್ವಾಮಿ, ತಿರುಮಲ, ಗಣೇಶ ಸೇರಿ ಗ್ರಾಮ ದೇವರ ಅಡ್ಡೆಗಳು ಜಾತ್ರೆಯಲ್ಲಿ ಭಾಗವಹಿಸಿದ್ದವು. ರಥ ಎಳೆಯುವ ವೇಳೆ ರಸ್ತೆ ಇಕ್ಕೆಲ ನಿಂತಿದ್ದ ಮಕ್ಕಳು, ಮಹಿಳೆಯರು ಉಘೇ ಉಘೇ ಎಂದು ಘೋಷಣೆ ಕೂಗಿದರು. ಉತ್ಸವ ಮೂರ್ತಿಗೆ ಮಂಡಕ್ಕಿ, ಬಾಳೆಹಣ್ಣು ಎಸೆದು ಪ್ರಾರ್ಥನೆ ಸಲ್ಲಿಸಿದರು. ಚಿಕ್ಕಮಗಳೂರು, ಮಲ್ಲಂದೂರು, ಜಕ್ಕನಹಳ್ಳಿ, ತಳಿಹಳ್ಳ, ಚನ್ನಗೊಂಡನಹಳ್ಳಿ, ಬಸಗೋಡು, ಹುಲುವತ್ತಿ, ಆವತಿ, ಹಿರೇಕೊಳಲೆ, ಕಬ್ಬಿನಹಳ್ಳಿ, ನರಗನಹಳ್ಳಿ, ನಾರಕಂತೆ ಮಠ ಸೇರಿ ಮೂರುಹಳ್ಳಿ ಎರಡು ಮಠ, ಮೂರೂರು, ಐದೂರು ಹಾಗೂ ಉಭಯ ನಾಡಿನ ಸಹಸ್ರಾರು ಭಕ್ತರು ಭಾಗವಹಿಸಿದ್ದರು.