oppo_2 
ಜಿಲ್ಲೆ

ಶ್ರೀಸಪ್ಪೇ ಮಲ್ಲೇಶ್ವರಸ್ವಾಮಿ ದೇಗುಲ ಉದ್ಘಾಟನೆ

ಹನೂರು: ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ತಾಲೂಕಿನ ಅಲಗುಮೂಲೆ ಗ್ರಾಮದ ಶ್ರೀ ಸಪ್ಪೇ ಮಲ್ಲೇಶ್ವರ ಸ್ವಾಮಿ ದೇಗುಲದ ಜಿರ್ಣೋದ್ಧಾರ, ಕಳಸ ಪ್ರತಿಷ್ಠಾಪನೆ ಹಾಗೂ ಸಂಪ್ರೋಕ್ಷಣೆ ಕಾರ್ಯಕ್ರಮವು ಸೋಮವಾರ ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.


ಹೊಯ್ಸಳರ ಕಾಲದಲ್ಲಿ ಶಿವನ ಮೂರ್ತ ಸ್ವರೂಪಿಯಾದ ಲಿಂಗವನ್ನು ಪ್ರತಿಷ್ಠಾಪಿಸಿ ದೇಗುಲವನ್ನು ನಿರ್ಮಿಸಲಾಗಿತ್ತು. ಇಲ್ಲಿ ನೆಲೆನಿಂತ ಜನರು ಈ ದೇಗುಲಕ್ಕೆ ಶ್ರೀ ಸಪ್ಪೇ ಮಲ್ಲೇಶ್ವರ ಸ್ವಾಮಿ ಎಂದು ಹೆಸರಿಟ್ಟು ಪೂಜಿಸಿಸುತ್ತಿದ್ದರು. ಪ್ರತಿ ತಿಂಗಳು ಹುಣ್ಣೆಮೆಯಂದು ದೇವರಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದರು. ದಶಕದಿಂದ ದೇಗುಲ ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿತ್ತು. ಇದನ್ನು ಮನಗಂಡ ಗ್ರಾಮಸ್ಥರು 2021ರಲ್ಲಿ ಪ್ರತಿ ಕುಟುಂಬದಿಂದ ಹಣ ಸಂಗ್ರಹಿಸುವುದರ ಜತೆಗೆ ಭಕ್ತರು ನೀಡಿದ್ದ ದೇಣಿಗೆ ಸೇರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರ ಮಾಡಿದ್ದಾರೆ.
ಉದ್ಘಾಟನೆ ಹಿನ್ನೆಲೆಯಲ್ಲಿ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಾನುವಾರ ಸಂಜೆ ದೇಗುಲದಲ್ಲಿ ಆಲಯ ಪ್ರವೇಶ, ಗೋಪೂಜೆ, ಪುಣ್ಯಾಹ, ಸ್ವಸ್ತಿವಾಚನ ಪೂಜೆ ನಡೆದವು. ಬಳಿಕ ದೇವತಾ ಪ್ರತಿಷ್ಠಾಪನ ಹೋಮ, ಹವನ, ವೇದ ಪಾರಾಯಣ ಹಾಗೂ ಉತ್ತಿಷ್ಟ ಅಷ್ಟಬಂಧನ ಪೂಜೆ ನೆರವೇರಿಸಲಾಯಿತು.

ಸೋಮವಾರ ಬೆಳಗ್ಗೆ 5.30ಕ್ಕೆ ಹೋಮ-ಹವನ, ಪುಣ್ಯಾಹುತಿ, ಅಭಿಷೇಕ, ಅಲಂಕಾರ, ಅಷ್ಟೋತ್ತರ, ಕೂಷ್ಮಾಂಡ, ಕದಳಿ ಛೇದನ, ಅಗ್ನಿದರ್ಶನ, ನೇತ್ರೋನ್ಮಿಲನ ಹಾಗೂ ಮಹಾಮಂಗಳಾರತಿ ಬೆಳಗಿಸಿ 10.40 ರಿಂದ 11.10ರವರೆಗೆ ಸಲ್ಲುವ ತುಲಾ ಲಗ್ನದಲ್ಲಿ ಗೋಪುರಕ್ಕೆ ಕಳಸ ಪ್ರತಿಷ್ಠಾಪಿಸಿ ಸಂಪ್ರೋಕ್ಷಣೆ ಮಾಡಲಾಯಿತು. ಚಾ.ನಗರ, ಮೈಸೂರು, ನಂಜನಗೂಡು, ಮಹದೇಶ್ವರಬೆಟ್ಟ, ಕೊಳ್ಳೇಗಾಲ, ಹನೂರು ಸೇರಿದಂತೆ ಹಲವು ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಬಳಿಕ ನಡೆದ ಧಾರ್ಮಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಡುಗುಂಡ ಶ್ರೀ ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀಕಂಠ ಸ್ವಾಮೀಜಿ ಮಾತನಾಡಿ, 18ನೇ ಶತಮಾನದಲ್ಲಿ ಶ್ರೀ ಮಲೆಮಹದೇಶ್ವರರು ಶೈಲದಿಂದ ಆಗಮಿಸುವ ವೇಳೆ ಇವರ ಜತೆ ಕೆಂಡಗಣ್ಣಸ್ವಾಮಿ, ಸಪ್ಪೇಮಲ್ಲೇಶ್ವರ ಸ್ವಾಮಿ, ಸಿದ್ಧೇಶ್ವರ ಸ್ವಾಮಿ, ಜಡೇರುದ್ರೇಶ್ವರ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇನ್ನು ಮುಂತಾದ ಪವಾಡ ಪುರುಷರು ಈ ಭಾಗಕ್ಕೆ ಆಗಮಿಸಿ ತಪಸ್ಸು ಮಾಡಿ ಇಲ್ಲಿಯೇ ಲಿಂಗೈಕ್ಯರಾಗಿದ್ದು ಗದ್ದುಗೆಯನ್ನು ಹೊಂದಿದೆ. ಇವರೆಲ್ಲರೂ ಸಮಾಜದಲ್ಲಿದ್ದ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ನೀಡುವುದರ ಮೂಲಕ ಈ ಭಾಗದ ಜನರಿಗೆ ಭಕ್ತಿಯ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ. ಹಸನಾದ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಜ್ಞಾನವನ್ನು ನೀಡಿ ಚಿರಸ್ಥಾಯಿಯಾಗಿದ್ದಾರೆ ಎಂದು ತಿಳಿಸಿದರು.


ಬಂಡಳ್ಳಿ ದೊಡ್ಡ ಮಠದ ಡಾ.ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಂಡೇಗಾಲದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಳ್ಳೇಗಾಲದ ಶಿವಪ್ಪ ಸ್ವಾಮೀಜಿ, ಚಿಲಕವಾಡಿಯ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲೂಪುರ ನಂದೀಶ್, ತಾಲೂಕು ಅಧ್ಯಕ್ಷ ಸೋಮಶೇಖರ್, ಜಿಲ್ಲಾ ನಿರ್ದೇಶಕರಾದ ಉದ್ದನೂರು ಪ್ರಸಾದ್, ಮುರುಡೇಶ್ವರ ಸ್ವಾಮಿ, ಬಸವರಾಜಪ್ಪ ಇದ್ದರು.