ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರೀವೇ ಸಂಚಾರ ಠಾಣೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಭರವಸೆ ನೀಡಿದರು.
ತಾಲೂಕಿನ ಮೂಲಕ ಹಾದು ಹೋಗಿರುವ ದಾಬಸ್ಪೇಟೆ& ಹೊಸಕೋಟೆ ಎಸ್ಟಿಆರ್ಆರ್ ಹೆದ್ದಾರಿ ಮತ್ತು ಯಲಹಂಕ&ಹಿಂದೂಪುರ ರಾಜ್ಯ ಹೆದ್ದಾರಿಗಳಲ್ಲಿನ ಅವ್ಯವಸ್ಥೆ, ಅಪಘಾತಗಳು, ಸಾವು&ನೋವು, ಸಂಚಾರಿ ಪೊಲೀಸ್ ಠಾಣೆಯ ಅಗತ್ಯದ ಕುರಿತು ಸದನದಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಧೀರಜ್ ಮುನಿರಾಜು ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ ಸಚಿವರು ಭರವಸೆ ನೀಡಿದರು. ಈ ಎರಡೂ ಹೆದ್ದಾರಿಗಳು ಉದ್ಘಾಟನೆಯಾದ ಬಳಿಕ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಮೂರು ತಿಂಗಳಲ್ಲಿ 50ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಕಳೆದ ವರ್ಷ 101 ಮಂದಿ ಮೃತಪಟ್ಟಿದ್ದರೆ, ಈಗ ಶೇ.25 ರಿಂದ 30 ಹೆಚ್ಚಿನ ಪ್ರಮಾಣದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಕಳೆದ ವರ್ಷದಿಂದಲೂ ಗೃಹ ಸಚಿವ ಪರಮೇಶ್ವರ ಅವರಿಗೆ ಟ್ರಾಫಿಕ್ ಪೊಲೀಸ್ ಸ್ಟೇಷನ್ ಕೊಡಿ, ಅವ್ಯವಸ್ಥಿತ ಹೆದ್ದಾರಿಗಳನ್ನು ಸರಿಪಡಿಸಿ ಎಂದು ಕೇಳುತ್ತಿದ್ದೇನೆ. ಈವರೆಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಬೇಸರಿಸಿದರು.
"ಸಾವಿನ ಹೆದ್ದಾರಿಗಳಿವೆ ಎಚ್ಚರಿಕೆ' ಶೀರ್ಷಿಕೆಯಡಿ ಮಾ.17 ರಂದು "ವಿಜಯವಾಣಿ' ಪ್ರಕಟಿಸಿದ್ದ ಸವಿಸ್ತಾರ ವರದಿ ಸಮೇತ ಸದನದಲ್ಲಿ ಪ್ರಸ್ತಾಪ ಮಾಡಿದ ಧೀರಜ್ ಮುನಿರಾಜು, 2011 ರಿಂದಲೂ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇಲ್ಲ. ಇರಬೇಕಾದ ಸಿಬ್ಬಂದಿಯಲ್ಲೇ ಕೇವಲ ಶೇ.40 ಸಿಬ್ಬಂದಿ ಇದ್ದಾರೆ. ಎರಡು ಟೋಲ್ ಹೆದ್ದಾರಿಗಳು ಇದ್ದರೂ ಒಂದು ಕ್ರಿಟಿಕಲ್ ಕೇರ್ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಆಂಬುಲೆನ್ಸ್ ಇಲ್ಲ. ತಾಲೂಕು ಆಸ್ಪತ್ರೆಯಲ್ಲಿಯೇ ಎಲ್ಲವನ್ನೂ ನಿರ್ವಹಣೆ ಮಾಡಬೇಕಿದೆ ಎಂದರು. ನಾನು ಕೇಳಿರುವ ಸುಗಮ ಸಂಚಾರಕ್ಕೆ ತೆಗೆದುಕೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ ಅಧಿಕಾರಿಗಳು ಏಕಮುಖ ಸಂಚಾರ ಮತ್ತು ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅನುಮೋದನೆ ಪಡೆದುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುತ್ತೇವೆ ಎಂದು ತಪ್ಪು ಉತ್ತರ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲ. ಒನ್ ವೇ ಇಲ್ಲ ಎಂದು ಶಾಸಕರು ಗಮನ ಸೆಳೆದರು.
ಸಂಚಾರಿ ಪೊಲೀಸ್ ಸ್ಟೇಷನ್ ಮಾಡಿ : ಧೀರಜ್ ಮುನಿರಾಜು ಸಂಚಾರ ಅವ್ಯವಸ್ಥೆ ಬಗ್ಗೆ ವಿವರಿಸುತ್ತಿರುವಾಗ ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯೆ ಪ್ರವೇಶಿಸಿ ದೊಡ್ಡಬಳ್ಳಾಪುರದಲ್ಲಿ ಹಲವು ಕೈಗಾರಿಕೆಗಳಿವೆ. ಕೈಗಾರಿಕಾ ಸಚಿವರು ಕ್ವಿನ್ ಸಿಟಿ ಕೂಡ ೂಷಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಚಾರಿ ಪೊಲೀಸ್ ಠಾಣೆ ಇದೆ. ದೊಡ್ಡಬಳ್ಳಾಪುರದಲ್ಲಿ ಏಕಿಲ್ಲ ?. ಒನ್ ವೇ, ಟ್ರಾಫಿಕ್ ಕಂಟ್ರೋಲ್ ನಂತಹ ಸಮಸ್ಯೆಗಳನ್ನು ಸ್ಥಳಿಯ ಪೊಲೀಸರು ಮಾಡುತ್ತಾರೆ. ಸರ್ಕಾರ ಸಂಚಾರಿ ಪೊಲೀಸ್ ಠಾಣೆಗೆ ಆದೇಶ ಮಾಡಬೇಕು ಗೃಹ ಸಚಿವರನ್ನು ಒತ್ತಾಯಿಸಿದರು.
ಅಪಘಾತಗಳು ಆಗದಂತೆ ತಡೆಯಲು ಕ್ರಮ : ಧೀರಜ್ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ನಾನು ಕೂಡ ದಾಬಸ್ ಪೇಟೆ&ಹೊಸಕೋಟೆ ರಸ್ತೆಯಲ್ಲಿ ಓಡಾಡಿದ್ದೇನೆ. ಈ ರಸ್ತೆಯಲ್ಲಿ ಎಲ್ಲೂ ಹಂಪ್ ಇಲ್ಲ, ಸಿಗ್ನಲ್ ಲೈಟ್ಸ್ ಇಲ್ಲ, ಟ್ರಾಫಿಕ್ಗೆ ಸಂಬಂಧಪಟ್ಟ ಯಾವುದೇ ರೀತಿಯ ಸೂಚನಾ ಫಲಕಗಳೂ ಇಲ್ಲ. ಹೈವೇ ಮಾಡಿದವರು ಏನೂ ಮಾಡಿಲ್ಲ. ಅಪಘಾತ ಪ್ರಕರಣಗಳು, ಸಾವುಗಳು ಹೆಚ್ಚಾದ ಬಳಿಕ ಹೆದ್ದಾರಿ ಮತ್ತು ಸಂಚಾರಿ ಪೊಲೀಸ್ ತರಿಗೆ ಸೂಚಿಸಿ ಬ್ಲಾಕ್ ಸ್ಪಾಟ್ಗಳನ್ನು ಪತ್ತೆ ಮಾಡಿ ಯಾವುದೇ ರೀತಿಯಲ್ಲಿ ಅಪಘಾತಗಳು ಆಗದಂತೆ ತಡೆಯಲು ಕ್ರಮವಹಿಸಲಾಗಿದೆ ಎಂದರು. ಸಂಚಾರಿ ಠಾಣೆ ಮಾಡಿಕೊಡುವುದರ ಬಗ್ಗೆ ಕಳೆದ ವರ್ಷವೇ ಹೇಳಿದ್ದೆ. ಈಗ ಪ್ರಸ್ತಾವನೆ ಕೇಳಿದ್ದೇವೆ. ಆದಷ್ಟು ಶ್ರೀವಾಗಿ ಸಂಚಾರಿ ಠಾಣೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಿಗ್ನಲ್ ಲೈಟ್ ಹಾಕಿ : ಯಲಹಂಕ&ಹಿಂದುಪುರ ರಾಜ್ಯ ಹೆದ್ದಾರಿಯಲ್ಲಿಯೂ ಆಂಬುಲೆನ್ಸ್ ಇಲ್ಲ, ರಸ್ತೆ ಸಂಪೂರ್ಣ ಮಾಡಿಲ್ಲ, ಸಿಗ್ನಲ್ ಲೈಟ್ಗಳನ್ನು ಹಾಕಿಲ್ಲ. ಇದನ್ನು ನಿರ್ವಹಣೆ ಮಾಡುತ್ತಿರುವ ಕಂಪನಿಯ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಧೀರಜ್ ಮುನಿರಾಜು ಗೃಹ ಸಚಿವರನ್ನು ಒತ್ತಾಯಿಸಿದರು.