ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಕರ ಸಂಕ್ರಾಂತಿ ಮಾರನೆಯ ದಿನದ ಕನು ಹಬ್ಬದ ಪ್ರಯುಕ್ತ ಬುಧವಾರ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತ ಪ್ರತಿಷ್ಠಾಪನೆಗೊಂಡಿದ್ದ ಶ್ರೀಆದಿರಂಗನಾಥಸ್ವಾಮಿ ಚಿಕ್ಕತೇರಿನ ಬ್ರಹ್ಮರಥೋತ್ಸವನ್ನು ಸಂಭ್ರಮದಿಂದ ನೆರವೇರಿಸಲಾಯಿತು. 
ಜಿಲ್ಲೆ

ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಪಂಚಲೋಹದ ಶ್ರೀರಂಗನಾಥಸ್ವಾಮಿ ಮೂರ್ತಿಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಪ್ರಸನ್ನ ಹಾಗೂ ವಿಜಯಸಾರಥಿ ನೇತೃತ್ವದಲ್ಲಿ ವೈದಿಕರ ತಂಡ ವಿಶೇಷ ಪೂಜಾ ಕೈಂಕರ್ಯಗಳನ್ನು ಅರ್ಪಿಸಿತು.

ವಿಷ್ಣು ಸಹಸ್ರನಾಮ ಪಠಣದೊಂದಿಗೆ ವಿಶೇಷ ಪಲ್ಲಕ್ಕಿಯ ಮೆರವಣಿಗೆ ನಡೆಸಿ ಹೋಮ, ಬಲಿಪ್ರದಾನ, ಯಾತ್ರದಾನಗಳೊಂದಿಗೆ ದೇವಾಲಯದ ಹೊರಭಾಗದ ಸುತ್ತಲು ಶ್ರೀದೇವರ ಮೂರ್ತಿಗಳನ್ನು ಚಿಕ್ಕತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭವ್ಯ ಬ್ರಹ್ಮೋತ್ಸವವನ್ನು ಪುರಜನರು ಹಾಗೂ ಶ್ರೀರಂಗನ ಭಕ್ತ ಸಮ್ಮುಖದಲ್ಲಿ ದೇವಾಲಯದ ಸುತ್ತಲು ಸಂಭ್ರಮದಿಂದ ಎಳೆದು ಸಂಪನ್ನಗೊಳಿಸಲಾಯಿತು.

ಕನು ಹಬ್ಬದ ಸಂಕೇತವಾಗಿ ರಥೋತ್ಸವ:

ಶ್ರೀ ಆದಿರಂಗನಾಥಸ್ವಾಮಿಗೆ ಉತ್ತರಾಯಣ ಸಮಯದಲ್ಲಿ ವಿಶೇಷವಾಗಿ ಎರಡು ಬ್ರಹ್ಮರಥೋತ್ಸವವನ್ನು ನೆರವೇರಿಸಲಾಗುತ್ತದೆ. ರಥಸಪ್ತಮಿಯ ಬ್ರಹ್ಮರಥೋತ್ಸವ ಮುನ್ನ ಈ ಕನು ಹಬ್ಬದ ಸಂಕೇತವಾಗಿ ಈ ಚಿಕ್ಕತೇರಿನ ರಥೋತ್ಸವ ನೆರವೇರಿಸುವುದು ಸಂಪ್ರದಾಯವಾಗಿದೆ.

ಮಕರ ಸಂಕ್ರಮಣ ಕಳೆದು ಮಾರನೇ ದಿನವನ್ನು ಕನು(ಗೋವು)ಗಳ ಪೂಜಿಸುವ ಹಬ್ಬವಾಗಿ ನಾಡಿನ ಜನರು ಆಚರಿಸಿ, ಪ್ರಸಾದವಾಗಿ ಕೆಂಪು ಅನ್ನ, ಹಳದಿ ಅನ್ನ ಹಾಗೂ ಬಿಳಿ ಅನ್ನವನ್ನು ಸಮರ್ಪಿಸಿ ಸವಿಯಲಾಗುವುದು. ಇಂತಹ ವಿಶೇಷತೆಯ ಸಮಯದಲ್ಲಿ ಮಹಾವಿಷ್ಣುವಿನ ಅನುಗ್ರಹ ದೊರಕಲು ಶ್ರೀರಂಗನ ಸ್ಮರಣೆ ಮಾಡಿ ಈ ಆಚರಣೆಯನ್ನು ಸಂಪ್ರದಾಯ ಪೂಜೆಗಳೊಂದಿಗೆ ಅನೂಚಾನವಾಗಿ ನಡೆಸಿಕೊಂಡು ಬರಲಾಗಿದೆ.

18ರವರೆಗೆ ಪ್ರವೇಶಕ್ಕೆ ಅವಕಾಶ: ಮಕರ ಸಂಕ್ರಾಂತಿ ಪ್ರಯುಕ್ತ ವರ್ಷಕ್ಕೊಮ್ಮೆ ತೆರೆಯುವ ವೈಕುಂಠ ದ್ವಾರದ ಪ್ರವೇಶಕ್ಕೆ ಭಕ್ತರಿಗಾಗಿ ಜ.18ರವರೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಆಡಳಿತ ಅವಕಾಶ ಕಲ್ಪಿಸಿದ್ದು, ಶ್ರೀರಂಗನಾಥಸ್ವಾಮಿ ಮೂಲ ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲಲ್ಲಿ ನಿಂತು ನಾರಾಯಣನನ್ನು ಪ್ರಾರ್ಥಿಸಬಹುದಾಗಿದೆ.