ಜಿಲ್ಲೆ

ಹುಬ್ಬಳ್ಳಿಯಲ್ಲಿ ಶ್ರೀರಾಮನ ಸ್ಮರಣೆ

ಮರಿದೇವ ಹೂಗಾರ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ವಿವಿಧ ದೇವಸ್ಥಾನ, ಬಡಾವಣೆಗಳಲ್ಲಿ ಶ್ರೀರಾಮನ ಭಕ್ತಿಯ ಪರಾಕಷ್ಠೆ ಮುಗಿಲು ಮುಟ್ಟಿತ್ತು.

ಶ್ರೀ ರಾಮ ಮಂದಿರ ಹಾಗೂ ಹನುಮಂತನ ದೇವಸ್ಥಾನಗಳಲ್ಲಿ ಅಷ್ಟೇ ಅಲ್ಲದೇ, ನಗರದ 200ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಬೆಳಗಿನಿಂದ ಸಂಜೆವರೆಗೆ ನಡೆದವು. ರಾಮತಾರಕ ಮಂತ್ರ ಜಪ, ಹೋಮ-ಹವನ ವೈಭವದಿಂದ ನೆರವೇರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ತಂಡಗಳು ಭಜನೆ, ದೇವರನಾಮ ಸ್ಮರಣೆ ಮಾಡಿದವು.

ನಗರದ ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ, ಕಮರಿಪೇಟ್ ರಾಮಮಂದಿರ, ದಾಜಿಬಾನಪೇಟ್ ತುಳಜಾಭವಾನಿ ದೇವಸ್ಥಾನ, ಗಣೇಶ ದೇವಸ್ಥಾನ, ಮೂರು ಸಾವಿರ ಮಠ, ಸಾಯಿ ಬಾಬಾ ಮಂದಿರ, ಸಿದ್ಧಾರೂಢ ಮಠ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ರಾಮ ಜಪಾ, ಭಗವದ್ಗೀತೆ ಪಠಣ, ಭಜನೆ, ಭಕ್ತಿಗೀತೆ, ರಾಮನಾಧಾರಿತ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ ಅದ್ದೂರಿಯಾಗಿ ನಡೆಯಿತು.

ದೇವಸ್ಥಾನಕ್ಕೆ ಆಗಮಿಸಿದ್ದ ಬಹಳಷ್ಟು ಭಕ್ತರು ಕೇಸರಿ ಅಂಗಿ, ಟೋಪಿ, ಶಾಲು ಧರಿಸಿದ್ದರು. ಮಹಿಳೆಯರು ಕೂಡ ಕೇಸರಿ ಸೀರೆಯುಟ್ಟು ಆಗಮಿಸಿದ್ದರು. ಮಕ್ಕಳು ಶ್ರೀರಾಮನ ವೇಷ ಧರಿಸಿ ಸಂಭ್ರಮಿಸಿದರು. ಸಾಲು ಸಾಲಾಗಿ ನಿಂತು ದೇವರ ದರ್ಶನ ಪಡೆದಿದ್ದಲ್ಲದೇ ಪ್ರಸಾದ ಸ್ವೀಕರಿಸಿ ಹೊರಬಂದರು. ವರ್ತಕರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ತಮ್ಮದೇ ಆದ ವೇದಿಕೆ ನಿರ್ವಿುಸಿಕೊಂಡು ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಿದರು. ಬಹಳಷ್ಟು ಭಕ್ತರು ನಗರದಲ್ಲಿ ಶೋಭಾಯಾತ್ರೆ ನಡೆಸಿದರು, ಯುವಕರು ಬೈಕ್​ಗೆ ಶ್ರೀರಾಮನ ಧ್ವಜ ಕಟ್ಟಿಕೊಂಡು ಜೈ ಶ್ರೀರಾಮ ಎಂದು ಜಯಘೊಷ ಮೊಳಗಿಸಿದರು.