ಜಿಲ್ಲೆ

ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿ: ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅಭಿಮತ

ರಾಮಾಯಣ ನಮ್ಮ ಭಾರತದ ಕಣ್ಣು. ಪ್ರಭು ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.

ದತ್ತ ಪೀಠದ ಆವರಣದ ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಮಹಾ ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡು ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಒಮ್ಮೆಯಾದರೂ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು. ಭಾರತ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಶ್ರೀರಾಮ ಎಂಬ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ ಎಂದು ಹೇಳಿದರು.

ಲೋಕಕಲ್ಯಾಣಾರ್ಥವಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಿ 11 ದಿನಗಳಿಂದ ಸಂಪೂರ್ಣ ರಾಮಾಯಣ ಪಾರಾಯಣ ಮಾಡಲಾಗಿದೆ. ನಮ್ಮ ಕರ್ನಾಟಕ, ನಮ್ಮ ದೇಶ ಹಾಗೂ ವಿಶ್ವದೆಲ್ಲೆಡೆ ಸದಾ ಶಾಂತಿ ಇರಬೇಕು ಎಂದು ಪ್ರಾರ್ಥಿಸಿದ್ದೇವೆ ಎಂದರು.
ಎಲ್ಲೆಡೆ ಕಷ್ಟದ ವಾತಾವರಣ, ಯುದ್ಧದ ವಾತಾವರಣ ಇದೆ. ಇದೆಲ್ಲ ಹೋಗಬೇಕೆಂದು ಸಂಕಲ್ಪ ಮಾಡಲಾಗಿದೆ. ಶ್ರೀ ರಾಮ-ಸೀತಾ ಮಾತಾ, ಆಂಜನೇಯ ಸ್ವಾಮಿ ಎಲ್ಲರಿಗೂ ಅನುಗ್ರಹ ನೀಡಲಿ ಎಂದು ಹಾರೈಸಿದರು. ದತ್ತ ಯಾಗ ಮಹಾ ಪೂರ್ಣಾವತಿ ಕೂಡ ಇಂದೇ ಆಗಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳ ಹಿಂದೆ ಇಡೀ ನಾಡಿನಲ್ಲಿ ಕರೊನಾ ಬಾಧಿಸುತ್ತಿದ್ದಾಗ ರಾಮಾಯಣ ಪಾರಾಯಣ ಮಾಡಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂದುಕೊಂಡಿದ್ದರು. ಪ್ರಾರಂಭದಲ್ಲಿ ಕೆಲ ವಿಘ್ನಗಳು ಬರಲಿದೆ ಎಂದು ಕೂಡ ಶ್ರೀಗಳು ತಿಳಿಸಿದ್ದರು. ನಾನು ಒಳಗೆ ರಾಮಾಯಣ ಪಾರಾಯಣ ಮಾಡಿಕೊಳ್ಳುತ್ತೇನೆ, ನೀವು ಮುಂದೆ ಮಾಡಿ ಎಲ್ಲ ಸರಿಯಾಗಲಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ರಾಮಾಯಣ ಪಾರಾಯಣ ಆಗಿದೆ. ಇದಕ್ಕೆ ಈ ಎಲ್ಲ ಋತ್ವಿಕರು ಮುಖ್ಯ ಕಾರಣ ಎಂದು ತಿಳಿಸಿದರು.
ಹಿಂದೆ ಶತಶ್ಲೋಕಿ ರಾಮಾಯಣದಿಂದಲೇ ಶಾಲೆಗಳಲ್ಲಿ ನಮ್ಮ ಪಾಠಗಳು ಪ್ರಾರಂಭ ಆಗುತ್ತಿದ್ದವು ಎಂದು ಸ್ಮರಿಸಿದ ಅವರು, ವೇದ ಓದಿದವರು ರಾಮಾಯಣ ಗೊತ್ತಿಲ್ಲ ಎಂದರೆ ಚೆನ್ನಾಗಿರುವುದಿಲ್ಲ. ಎಲ್ಲರೂ ಒಮ್ಮೆಯಾದರೂ ರಾಮಾಯಣ ಓದಿ, ಅದರಲ್ಲಿನ ಸಾರವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲ್ಲಿಗೆ ರಾಮಾಯಣ ಪಾರಾಯಣ ಹಾಗೂ ಶ್ರೀ ಮದ್ರಾಮಾಯಣ ಯಾಗ ಎರಡೂ ಯಶಸ್ವಿಯಾಗಿದೆ. 24,000 ಆಹುತಿಗಳನ್ನು ಸಮರ್ಪಣೆ ಮಾಡಲಾಗಿದೆ. ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು 52 ಲಕ್ಷ ಪೂರ್ತಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮಾಯಣವನ್ನು ನಮ್ಮ ಆಶ್ರಮದ ವೇದ ಶಾಲೆಯ ಉಪಾಧ್ಯಾಯರು, ವಿದ್ಯಾರ್ಥಿಗಳು ಓದಿದ್ದಾರೆ. ಶ್ರೀ ವಂಶಿಕೃಷ್ಣ ಘನಪಾಠಿ ಅವರು ಇವೆಲ್ಲದಕ್ಕೂ ಆಧಾರಸ್ತಂಭವಾಗಿ ನಿಂತರು ಎಂದು ಎಲ್ಲರನ್ನು ಸ್ವಾಮೀಜಿ ಶ್ಲಾಘಿಸಿದರು.
ಭಾನುವಾರ ಬೆಳಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಿಂದ ಸೀತಾರಾಮ ಆಂಜನೇಯ ಸಮೇತ ಉತ್ಸವ ಮೂರ್ತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಸನ್ನಿಧಿವರೆಗೆ ತರಲಾಯಿತು. ಶ್ರೀಗಳು ಈ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.