ಜಿಲ್ಲೆ

ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಮರೇವಾಡ ಗ್ರಾಮದ ಅಮರಗೋಳ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡ, ಗಣಪತಿ ಮೂರ್ತಿ, ನವಗೃಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪಲ್ಲಕ್ಕಿ ಹಾಗೂ ಕಳಸಾರೋಹಣ ಲೋಕಾರ್ಪಣೆ ಆ. 14ರಂದು ಜರುಗಲಿದೆ.
ಅಂದು ಬೆಳಗ್ಗೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ (ನಂದೀಶ್ವರ) ದೇವಸ್ಥಾನದ ದ್ವಾರ ಬಾಗಿಲಿನಿಂದ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಕುಂಭ ಮೆರವಣಿಗೆ ಹಾಗೂ ಸಕಲ ವಾದ್ಯಮೇಳದೊಂದಿಗೆ ಕಳಸ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಕಳಸಾರೋಹಣ ಜರುಗಲಿದೆ. ನಂತರ ನವಗೃಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಶ್ರೀ ಗಣೇಶ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿವೆ. ಮೇದಮೂರ್ತಿ ಶೇಖಯ್ಯ ಹಿರೇಮಠ, ಅಂಕಲಯ್ಯ ಯರಗಂಬಳಿಮಠ, ತಿಮ್ಮಾಪುರದ ವೇದಮೂರ್ತಿ ಬಸಯ್ಯ ಹಿರೇಮಠ ಉಪಸ್ಥಿತರಿರುವರು.

ಪ್ರವಚನ: ಶ್ರಾವಣ ಮಾಸದ ನಿಮಿತ್ತ ವೇದಮೂರ್ತಿ ಚನ್ನಬಸಯ್ಯ ಹಿರೇಮಠ ಅವರಿಂದ `ಸಿದ್ಧಾಂತ ಶಿಖಾಮಣಿ' ಪುರಾಣ ಪ್ರವಚನ ರಾತ್ರಿ 7 ಗಂಟೆಯಿAದ 9ರವರೆಗೆ ನಡೆಯಲಿದೆ.

ಮಹಾಪ್ರಸಾದ: ಕಾರ್ಯಕ್ರಮದ ಅಂಗವಾಗಿ ಅಂದು ಭಕ್ತರಿಗೆ ಸಿವಿಲ್ ಗುತ್ತಿಗೆದಾರ ಚಿದಾನಂದ ಚಂದರಗಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.