|ಕೃಷ್ಣರಾಜ ಕುತ್ಪಾಡಿ
ರಾಮನಿಲ್ಲದ ರಾಮಾಯಣವನ್ನು ಊಹಿಸುವುದೇ ಕಷ್ಟ. ಯಾವ ಪಾತ್ರಗಳೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು. ಮಂಥರೆಯ ಪಾತ್ರ ಕೂಡ ರಾಮನಿಂದಲೇ ಪೋಷಿತವಾದುದು. ಶ್ರೀರಾಮಚಂದ್ರ ಎಲ್ಲರನ್ನೂ ಪ್ರಭಾವಿಸಿದ ಪಾತ್ರ. ಜಗತ್ತಿನ ಎಲ್ಲರನ್ನೂ ವ್ಯಾಪಿಸಿ, ಒಂದುಗೂಡಿಸಿದ ಮಿತ್ರ. ಈಗಲೂ ನಮ್ಮ ನಡುವಿನ ನೂರಾರು ತೊಡಕುಗಳಿಗೆ ಪರಿಹಾರ ಸೂತ್ರ. ಗುಣಗಳ ಸಾಧನೆಗಳ ನಿಧಿ ಎನಿಸಿದವನನ್ನು ಮಾತ್ರ ಇತಿಹಾಸದ ಪುಟಗಳು ತನ್ನೊಳಗೆ ಹುದುಗಿಸಿಕೊಳ್ಳುತ್ತವೆ. ದೇಹದಿಂದಲೂ, ಮನಸ್ಸಿನಿಂದಲೂ ಲಕ್ಷಣಯುಕ್ತನಾದ ರಾಮಚಂದ್ರನ ಪರಿಚಯದೊಂದಿಗೆ ರಾಮಾಯಣ ಮೊದಲುಗೊಳ್ಳುತ್ತದೆ.
ರಾಮನ ರಾಜ್ಯದಲ್ಲಿದ್ದಾಗಲೇ ವಾಲ್ಮೀಕಿಗಳು ರಾಮನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನಾರದರಲ್ಲಿ ಕೇಳಿದ ಪ್ರಶ್ನೆ-
ಕೋನ್ವಸ್ಮಿನ್ ಸಾಂಪ್ರತಮ್ ಲೋಕೇ ಗುಣವಾಂನ್ ಕಶ್ಚ ವೀರ್ಯವಾನ್| ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ| ಪ್ರಸ್ತುತ ಲೋಕದಲ್ಲಿ ಗುಣವಂತ ಯಾರಿದ್ದಾನೆ?
ಹಿಡಿದ ಕೆಲಸವನ್ನು ಮುಗಿಸುವವನು. ಯಾವುದರ ಮೇಲೇ ಲೋಕ ನೆಲೆಸಿದೆ ಎಂದು ಚೆನ್ನಾಗಿ ಅರಿತವನು. ಪಡೆದ ಸಹಾಯವನ್ನು ನೆನೆದು ಆನಂದಿಸುವವನು. ಅಭಿನಂದಿಸುವವನು. ಆಡಿದ ಮಾತಿಗೆ ಎಂದೂ ತಪ್ಪದವನು. ಅನುಷ್ಠಾನಗಳನ್ನು ನಿಷ್ಠೆಯಿಂದ ನಡೆಸುವವನು. ಒಳ್ಳೆಯ ನಡೆತಗಳಿಂದಲೇ ಕೂಡಿದವನು. ಎಲ್ಲ ಜೀವಜಾತಗಳಿಗೂ ಸರ್ವದ ಹಿತವನ್ನು ಬಯಸುವವನು. ಚೆನ್ನಾಗಿ ಎಲ್ಲವನ್ನೂ ಬಲ್ಲವನು. ಕಾರ್ಯಗಳನ್ನು ನಡೆಸುವಲ್ಲಿ ಸಮರ್ಥನು. ಒಂದೇ ತೆರನಾಗಿ, ಪ್ರಿಯವಾಗಿ ಕಾಣಿಸಿಕೊಳ್ಳುವವನು. ತನ್ನನ್ನು ತಾನು ಸರಿಯಾಗಿ ಅರ್ಥೈಸಿಕೊಂಡವನು. ಕೋಪದ ವಶಕ್ಕೆ ಎಂದೂ ಸಿಕ್ಕದವನು. ಇನ್ನೊಬ್ಬರ ಏಳಿಗೆಗೆ ಅಸೂಯೆ ಪಡದವನು. ಯಾರ ಯುದ್ಧದ ಕೆಚ್ಚಿಗೆ ದೇವತೆಗಳೂ ಬೆದರುವರೋ ಅಂಥವನು ಯಾರಾದರೂ ನಮ್ಮ ನಡುವೆಯೇ ಇರುವನೇ? ಇದ್ದರೆ ಅವನ ಬಗ್ಗೆ ನನಗೆ ತುಂಬ ಕುತೂಹಲವಿದೆ ತಿಳಿಸಿಕೊಡಿ.
ಇದಕ್ಕೆ ಉತ್ತರವಾಗಿ ನಾರದರು ಸಂಕ್ಷೇಪ ರಾಮಾಯಣವನ್ನೇ ಮುಂದಿರಿಸಿದ್ದಾರೆ. 16 ಗುಣಗಳಿಂದ ಕೂಡಿದ ವ್ಯಕ್ತಿಯನ್ನು ಪ್ರಶ್ನಿಸಿದರೆ 72 ಗುಣಗಳ ಮೊತ್ತವನ್ನಾಗಿ ರಾಮನನ್ನು ನಾರದರು ಉತ್ತರಿಸಿದ್ದಾರೆ. ಇಕ್ವಾಕುವಿನ ಕುಲದವನು, ಗುಣಗಳ ಗಣಿ ಎನಿಸಿದ ರಾಮನೆಂಬ ಹೆಸರಿನವನು ಹೀಗೆ ಬಾಲಕಾಂಡದ ಮೊದಲ ಸರ್ಗದ ಎಂಟನೇ ಶ್ಲೋಕದಿಂದ ಹತ್ತೊಂಭತ್ತನೇ ಶ್ಲೋಕದ ತನಕ ಗುಣಧಾಮ ರಾಮನನ್ನು ತುಂಬಿಕೊಳ್ಳುವುದೆ ಸುಖ. ರಾಮಾಯಣದ ತುಂಬ ಈ ಗುಣಗಳದ್ದೇ ವರ್ಣನೆ.
ಗುರುಗಳ ಒಡನಾಟ ಕಲಿಕೆಯ ಮುಖ್ಯಭಾಗ: ರಾಜಕುಮಾರನಾಗಿಯೂ ಗುರುಗಳ ಜೊತೆ ಕಾಡಿನಲ್ಲಿ ಓಡಾಡುವಾಗ ಸೌಕರ್ಯವನ್ನು ಬಯಸಲಿಲ್ಲ. ಗುರುಗಳಂತೆಯೇ ನೆಲದಲ್ಲಿಯೇ ಮಲಗಿದ. ಹಣ್ಣು ಹಂಪಲುಗಳನ್ನು ತಿಂದು ಜೀವಿಸಿದ. ಗುರುಗಳ ಸೇವೆ ಬಿಡದೆ ಮಾಡಿದ. ಅಸ್ತ್ರಗಳನ್ನು ಪಡೆದ. ಪ್ರಶ್ನಿಸಿ ಗುರುಗಳಿಂದ ಉತ್ತರಗಳನ್ನು ಪಡೆದ. ಗುರುಗಳ ಅಪ್ಪಣೆಯಂತೆ ರಕ್ಕಸರೊಡನೆ ಬಡಿದಾಡಿದ.
ಕೌಟುಂಬಿಕ ಚೌಕಟ್ಟು ಸಮಾಜದ ಬುನಾದಿ: ಶ್ರೀರಾಮ ಎಂದರೆ ನೆನಪಾಗುವುದು ಸೀತೆ, ತಮ್ಮಂದಿರು ಮತ್ತು ಹನುಮಂತ. ಎಲ್ಲರೊಡನೆ ಒಡಗೂಡಿದ ರಾಮನೆ ಎಲ್ಲರಿಂದಲೂ ಆರಾಧ್ಯ. ಎಲ್ಲ ಬಾಂಧವ್ಯಗಳನ್ನು ಗಟ್ಟಿಯಾಗಿ ಉಳಿಸಿಕೊಂಡ ಧೀಮಂತ. ರಾಮನ ಸುತ್ತ ಸುಳಿದಾಡಿದವರು ರಾಮನಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿರುತ್ತಿದ್ದರು. ಸುಮಿತ್ರಾ ತನ್ನೊಬ್ಬನೇ ಮಗನನ್ನು ರಾಮನೊಡನೆ ಕಳುಹಿಸಿಕೊಡುವಳು.
ಅವಕಾಶದ ದುರುಪಯೋಗ ಸಲ್ಲದು: ರಾಮಕಾಡಿಗೆ ಹೊರಡುವಾಗ ದಶರಥನು ಮತ್ತೆ ತನ್ನ ಕೋರಿಕೆಯನ್ನಿರಿಸುತ್ತಾನೆ. ‘ಕೈಕೇಯಿಯ ಮೋಹಕ್ಕೆ, ದುರ್ಬುದ್ಧಿಗೆ ಬಲಿಯಾಗಿ ವರದ ನೆಪದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಿದ್ದೇನೆ. ನನ್ನ ತಪ್ಪನ್ನು ಸರಿಪಡಿಸಲೋಸುಗ ನನ್ನನ್ನೇ ನಿಗ್ರಹಿಸಿ ನೀನೇ ಈ ಅಯೋಧ್ಯೆಯ ಗಾದಿಯನ್ನೇರು’ ಎಂದು ರಾಜ ದಶರಥ ಇನ್ನಿಲ್ಲದಂತೆ ಬೇಡಿಕೊಳ್ಳುತ್ತಾನೆ. ‘ನನ್ನ ಮಾತು ನಡೆಸುವ ಮಗ ಸಿಕ್ಕಿಬಿಟ್ಟನಲ್ಲ’ ಎಂದು ಪರಿತಪಿಸುತ್ತಾನೆ. ರಾಜ್ಯ ಪಡೆವ ಅವಕಾಶ ಸಿಕ್ಕಿತು ಎಂದು ಭಾವಿಸಿ, ಮಾತು ತಪ್ಪಲಿಲ. ವಿಭೀಷಣ ಸರ್ವಸ್ವವನ್ನೂ ರಾಮನಿಗೆ ಒಪ್ಪಿಸಿದಾಗಲೂ ರಾಮ ಲಂಕೆಯಲ್ಲಿ ಉಳಿಯಲಿಲ್ಲ.
ಸದವಕಾಶಗಳನ್ನು ಕೈ ಚೆಲ್ಲದಿರು: ಕಾಡಿಗೆ ಬಂದಾಗಲೂ ಕ್ಷಾತ್ರತೇಜಸ್ಸಿನಿಂದ ನೊಂದವರ ಕಣ್ಣೀರು ಒರೆಸಿದ. ಕಾಡಿನ ಸೊಬಗನ್ನು ಸೀತೆಗೆ ತೋರಿಸುತ್ತ ಕಾಡು ಕೂಡ ಮೋಡಿ ಮಾಡಬಲ್ಲದು ಎಂದು ತೋರಿಸಿಕೊಟ್ಟ. ಶಬರಿಯನ್ನು ಹುಡುಕಿಕೊಂಡು ಹೋಗಿ ಅವಳಿಟ್ಟಿದ್ದ ಹಣ್ಣನ್ನು ಸ್ವೀಕರಿಸಿ ಉದ್ಧರಿಸಿದ. ಅಹಲ್ಯಾ ಗೌತಮರನ್ನು ಒಂದುಗೂಡಿಸಿದ. ರುಮೆಯ ಜೊತೆಗೆ ಸುಗ್ರೀವನನ್ನು ಸಿಂಹಾಸನದಲ್ಲಿ ಕೂಡಿಸಿದ. ವಿಭೀಷಣನನ್ನು ಕೂಡ ಪಟ್ಟಕ್ಕೆ ಏರಿಸಿದ. ಹನುಮಂತನನ್ನು ಅಪ್ಪಿಕೊಂಡ. ಒಳ್ಳೆಯ ಕೆಲಸ ಮಾಡಲು ಸಿಕ್ಕ ಯಾವ ಅವಕಾಶವನ್ನು ರಾಮಚಂದ್ರ ಕೈ ಚೆಲ್ಲಲಿಲ್ಲ.
ರಾಮ ಎಲ್ಲರಿಗೂ ಸಂಬಂಧ ಪಟ್ಟವನು. ಎಲ್ಲ ಕಾಲಕ್ಕೂ ಹೊಂದುವವನು. ಇವತ್ತು ರಾಮ ನಮ್ಮ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಾನೆ. ಚೆಲುವ ರಾಮರಾಜ್ಯ ಉದಯವಾಗಲಿ. ಬದುಕಿ; ಬದುಕಲು ಬಿಡಿ ಎಂಬ ಸನಾತನ ಧರ್ಮದ ಪತಾಕೆ ಮುಗಿಲೆತ್ತರಕ್ಕೆ ಏರಲಿ.
ಹೆತ್ತು ಹೊತ್ತವರ ಮಾತು ಪಾಲನೀಯ
ತಂದೆಯ ಆದೇಶದಂತೆ ಗುರು ವಿಶ್ವಾಮಿತ್ರರ ಜೊತೆ ಕಾಡಿಗೆ ತೆರಳಿದ. ಪ್ರಜೆಗಳಿಗೆ ಅತ್ಯಂತ ಹತ್ತಿರದವನಾದ. ಒಂದು ಅರ್ಥದಲ್ಲಿ ಎಲ್ಲರ ಮನೆಮಗನಾದ. ಎಲ್ಲ ತಾಯಿಯರನ್ನು ಅಭಿಮಾನದಿಂದ ಕಂಡ. ಅವರ ಆಣತಿಗಳನ್ನೆಲ್ಲ ಬಿಡದೆ ಪಾಲಿಸಿದ. ತನ್ನೊಡನೆ ಕಾಡಿಗೆ ಬರುವೆ ಎಂದು ಹಠಮಾಡಿದ ತಾಯಿಗೆ ಸ್ವಕರ್ತವ್ಯ ಬೋಧೆಯನ್ನು ಮಾಡಿದ. ಕಾಡು ಸೇರಿದ ಬಳಿಕ ಭರತ, ವಸಿಷ್ಠಾದಿ ಗುರುಗಳು, ತಾಯಿಯರು ಎಷ್ಟು ಬಗೆಯಿಂದ ಒತ್ತಾಯಿಸಿದರೂ ನಯವಾಗಿಯೇ ರಾಜ್ಯಾಧಿಕಾರವನ್ನು ಪಕ್ಕಕ್ಕಿರಿಸಿದ. ತಾನು ನೀಡಿದ ಪಾದುಕೆಗೆ ಬದಲಾಗಿ ಭರತನಿಂದ ಕೈಕೇಯಿಯನ್ನು ಎಂದೂ ನಿಂದಿಸುವುದಿಲ್ಲ ಎಂಬ ಮಾತನ್ನೂ ತೆಗೆದುಕೊಂಡ.
(ಲೇಖಕರು ಸಂಸ್ಕೃತ ಉಪನ್ಯಾಸಕರು)