ಜಯಪುರದ ಸಾಕ್ಷಿ ಹನುಮಾನ ದೇವಾಲಯದಲ್ಲಿ ಎಸ್.ಎಸ್. ಬೊಮ್ಮನಹಳ್ಳಿ ಸುದ್ದಿಗೋಷ್ಠಿ ನಡೆಸಿದರು. ಗುರುರಾಜ ಆಚಾರ್ಯ ಹೆರಕಲ್ಲ, ಡಿ.ಎಸ್. ಕಾಮರೆಡ್ಡಿ ಮತ್ತಿತರರಿದ್ದಾರೆ.  
ಜಿಲ್ಲೆ

ಸಾಕ್ಷಿ ಹನುಮಾನ ದೇವಾಲಯದಲ್ಲಿ ಶ್ರೀರಾಮ ತಾರಕ ಯಜ್ಞ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಗಣೇಶ ನಗರದ ಸಾಕ್ಷಿ ಹನುಮಾನ ದೇವಾಲಯದಲ್ಲಿ ಜ.22 ರಂದು ಬೆಳಗ್ಗೆ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಬೊಮ್ಮನಹಳ್ಳಿ ಹೇಳಿದರು.

ರಾಮ ಮಂದಿರ ಉದ್ಘಾಟನೆಯತ್ತ ಇಡೀ ವಿಶ್ವವೇ ಭಾರತದತ್ತ ಚಿತ್ತ ನೆಟ್ಟಿದೆ. ರಾಮ ಮಂದಿರವೇನೋ ನಿರ್ಮಾಣವಾಗಿದ್ದು, ರಾಮರಾಜ್ಯದ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಾಗಿದೆ, ರಾಮ ಮಂದಿರ ಲೋಕಾರ್ಪಣೆಯನ್ನು ಆಧ್ಯಾತ್ಮಿಕವಾಗಿ ಸಂಭ್ರಮಿಸುವ ದೃಷ್ಟಿಯಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಂದು ಬೆಳಗ್ಗೆ 6 ಕ್ಕೆ 5 ಹೋಮ ಕುಂಡಗಳಲ್ಲಿ ಯಜ್ಞ ನಡೆಯಲಿದೆ. ಒಂದು ಲಕ್ಷ ರಾಮನಾಮ ಸ್ಮರಣೆ ಮಾಡಲಾಗುತ್ತದೆ. ಗುರುರಾಜ ಆಚಾರ್ಯ ಹೆರಕಲ್ಲ ನೇತೃತ್ವದಲ್ಲಿ ನಡೆಯಲಿರುವ ಈ ಯಜ್ಞದಲ್ಲಿ ಸುಮಾರು 25 ಕ್ಕೂ ಹೆಚ್ಚು ಋತ್ವಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅದೇ ದಿನ ಬೆಳಗ್ಗೆ ರಾಮನಗರದ ತೊಂಟದಾರ್ಯ ಮಠದಿಂದ ಕುಂಭಮೇಳದೊಂದಿಗೆ ರಾಮ ಮೂರ್ತಿ ಮೆರೆವಣಿಗೆಯು ದೇವಸ್ಥಾನಕ್ಕೆ ಆಗಮಿಸಲಿದೆ. ಸಂಜೆ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಹಾಗೂ ದೀಪೋತ್ಸವ ನಡೆಯಲಿದೆ ಎಂದರು.

ಹಲವು ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಕೈಗೊಳ್ಳಲಾಗುವುದು. ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಈ ಮಹಾನ್ ಯಜ್ಞ ಕಾರ್ಯದಲ್ಲಿ ಭಾರತೀಯ ಸಾಂಪ್ರದಾಯಿಕ ಮಡಿ, ವಸ್ತ್ರ ಧರಿಸಿ ಬರಬೇಕು. ಮತ್ತು ಪ್ರತಿಯೊಬ್ಬರಿಗೂ ಹೋಮದಲ್ಲಿ ಸ್ವಾಹಾಕಾರಕ್ಕೆ ಅವಕಾಶ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಗುರುರಾಜ ಆಚಾರ್ಯ ಹೆರಕಲ್ಲ, ಡಿ.ಎಸ್. ಕಾಮರೆಡ್ಡಿ, ಪಿ.ವಿ. ಗುಮಾಸ್ತೆ, ಬಿ.ಎನ್. ಜ್ಯೋತಿ, ವಿಜಯ ಜೋಶಿ ಮತ್ತಿತರಿದ್ದರು.