ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆಯಿಂದಾಗಿ ಯುವತಿಯರು ಮತ್ತು ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯಮುಕ್ತ ವಾತಾವರಣ ನಿರ್ವಿುಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದ ಪರಿಣಾಮ ಹತ್ಯೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಹಾಗಾಗಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಎಂದು ಪ್ರತಿಭಟನಾನಿರತರು ರಾಷ್ಟ್ರಪತಿ ಅವರನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಕಳೆದ ಐದಾರು ತಿಂಗಳಿಂದ ಅಶಾಂತಿ ತಾಂಡವಾಡುತ್ತಿದೆ. ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಾದಕ ವಸ್ತುಗಳ ಸಾಗಾಣಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಒಂದೇ ತಿಂಗಳಲ್ಲಿ ನಡೆದ ಎರಡು ಬರ್ಬರ ಹತ್ಯೆ, ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ, ಮಡಿಕೇರಿಯಲ್ಲಿ ಯುವತಿಯ ರುಂಡ ಕತ್ತರಿಸಿದ ಪ್ರಕರಣ, ಯಾದಗಿರಿ ದಲಿತ ವ್ಯಕ್ತಿಯ ಹತ್ಯೆ, ಮುನವಳ್ಳಿಯಲ್ಲಿ ವಿವಾಹಿತ ಮಹಿಳೆಯ ಮೇಲಿನ ದೌರ್ಜನ್ಯ ಸೇರಿ ಮತಾಂತರಕ್ಕೆ ಯತ್ನ ಪ್ರಕರಣಗಳು ರಾಜ್ಯದ ಜನರನ್ನು ತಲ್ಲಣಗೊಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ಸಮಾಜ ವಿರೋಧಿ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಗುಣಧರ ದಡೋತಿ, ಮಂಜು ಕಾಟಕರ್, ನಾಗರಾಜ ಸೌತಕಾಯಿ, ನಾಗರಾಜ ಹುರಕಡ್ಲಿ, ಬಸು ದುರ್ಗದ, ಬಸವರಾಜ ಗೌಡರ, ಪ್ರವೀಣ ಮಾಳದಕರ, ವಿಜಯ ದೇವರಮನಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.