ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಜಿಲ್ಲಾ ಶ್ರೀರಾಮ ಸೇನಾ ವತಿಯಿಂದ ಗುರುವಾರ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.
ಸೇನಾ ಕಾರ್ಯಕರ್ತರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಜಿ ಬಳಿಕ ಪೂಜೆ ಸಲ್ಲಿಸಿದರು. ಜೈ ಶ್ರೀ ರಾಮ...ಬೋಲೋ ಭಾರತ ಮಾತಾ ಕಿ...ಜೈ., ಭಕ್ತ ಕನಕದಾಸರಿಗೆ ಜಯವಾಗಲಿ.. ಎಂಬಿತ್ಯಾದಿ ಘೊಷಣೆ ಮೊಳಗಿಸಿದರು. ಶ್ರೀ ರಾಮ, ಜೈ ರಾಮ..ಜೈ ಜೈ ರಾಮ ...ಭಜನೆ ಹಾಡಿದರು. ಪ್ರಾರಂಭದಲ್ಲಿ ಗೋಮೂತ್ರ ಸಿಂಪಡಿಸಿ ಮೈದಾನ ಶುಚಿಗೊಳಿಸಲಾಯಿತು.
ಈದ್ಗಾ ಮೈದಾನದ ನಿರ್ದಿಷ್ಟ ಸ್ಥಳದಲ್ಲಿ 2 ಗಂಟೆಗಳ ಕಾಲ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅನುಮತಿ ನೀಡಿತ್ತು. ಈದ್ಗಾ ಕಾಣದಂತೆ ತಗಡಿಗೆ ಶೀಟ್ ಮತ್ತು ಪರದೆಯಿಂದ ಮರೆಮಾಚಲಾಗಿತ್ತು. ಬಿಗು ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಖುದ್ದು ಡಿಸಿಪಿ ರಾಜೀವ ಎಂ. ಸ್ಥಳದಲ್ಲಿ ಇದ್ದರು. ಸೇನಾ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು.
ಶ್ರೀ ರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಮಂಜುನಾಥ ಕಾಟೀಗರ, ಬಸವರಾಜ ಗೌಡರ್, ಬಸು ದುರ್ಗದ, ಪ್ರವೀಣ ಮಾಳೇದಕರ, ಮಹಾಂತೇಶ ತೋಂಗಳಿ, ಇತರರು ಇದ್ದರು.