ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀರಾಮ ನವಮಿಯನ್ನು ಬುಧವಾರ ವೈಭವದಿಂದ ಆಚರಿಸಿ, ಭಕ್ತರಿಗೆ ಮಜ್ಜಿಗೆ, ಪಾನಕ-ಪ್ರಸಾದವನ್ನು ವಿತರಿಸಲಾಯಿತು.  
ಜಿಲ್ಲೆ

ಹೋಬಳಿಯಾದ್ಯಂತ ಶ್ರೀರಾಮನವಮಿ ಆಚರಣೆ

ಹಿರೀಸಾವೆ : ಹೋಬಳಿಯಾದ್ಯಂತ ಶ್ರೀರಾಮನವಮಿ ಹಿನ್ನೆಲೆಯಲ್ಲಿ ಬುಧವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಇದರೊಂದಿಗೆ ಪಾನಕ, ಪ್ರಸಾದ ವಿನಿಯೋಗ, ಅನ್ನದಾಸೋಹ ನಡೆಯಿತು.
ಪಟ್ಟಣದ ಶ್ರೀ ಆಂಜನೇಯಸ್ವಾಮಿ ಸನ್ನಿಧಿ, ಕಿರೀಸಾವೆ ಗಡಿ ಆಂಜನೇಯಸ್ವಾಮಿ, ಜಿನ್ನೇನಹಳ್ಳಿ, ಕಬ್ಬಳಿ, ದಿಡಗ, ಮತಿಘಟ್ಟ, ಉಳ್ಳಾವಳ್ಳಿ, ತುಪ್ಪದಹಳ್ಳಿ, ಬಿಳಿಕೆರೆ, ಡಿ.ತುಮಕೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶ್ರೀರಾಮನವಮಿ ಆಚರಿಸಲಾಯಿತು. ದಿಡಗ ಗ್ರಾಮದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಡಾ.ರಾಜ್ ವೃತ್ತದಲ್ಲಿರುವ ದೊಡ್ಡ ಅರಳಿಮರದ ಕೆಳಗೆ ಹಸಿರು ಚಪ್ಪರ ಹಾಕಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಅರಳಿ ಕಟ್ಟೆಯ ಮೇಲೆ ವಿವಿಧ ಹೂಗಳಿಂದ ಸಿಂಗರಿಸಿದ್ದ ಪುಷ್ಪ ಪಲ್ಲಕ್ಕಿಯ ಮೇಲೆ ಶ್ರೀ ರಾಮಚಂದ್ರನ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಯಿತು.
ಮಧ್ಯಾಹ್ನ 12.30ರ ಸುಮಾರಿನಲ್ಲಿ ಶ್ರೀ ರಾಮಲಿಂಗೇಶ್ವರಸ್ವಾಮಿ ಸನ್ನಿಧಿಯ ಪ್ರಧಾನ ಅರ್ಚಕ ಶ್ರೀ ರಾಮಚಂದ್ರಯ್ಯ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಭಕ್ತರು ಶ್ರೀರಾಮನಾಮ ಜಪಿಸಿ ಜಯಘೋಷ ಕೂಗಿದರು. ಉಳ್ಳಾವಳ್ಳಿ ಗ್ರಾಮದ ಅರಳಿಮರದ ಬಳಿ ಶ್ರೀರಾಮನವಮಿ ಆಚರಿಸಿದ್ದು, ಪ್ರಧಾನ ಅರ್ಚಕ ಪುಟ್ಟರಾಜ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಾನಕ, ಮಜ್ಜಿಗೆ ಹಾಗೂ ಪ್ರಸಾದ ವಿತರಿಸಲಾಯಿತು. ನಂತರ ಅನ್ನದಾಸೋಹ ನಡೆಯಿತು. ದಿಡಗ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಯೋಗೇಶ್, ಗ್ರಾಮಸ್ಥರಾದ ಕಾಂತರಾಜ್, ತ್ಯಾಗರಾಜ್, ರಾಮಚಂದ್ರು, ಅಣ್ಣಪ್ಪಸ್ವಾಮಿಗೌಡ, ಕೃಷ್ಣೇಗೌಡ, ಅಶೋಕ್, ಗಿರೀಶ್, ಮಂಜಣ್ಣ, ಎಚ್.ಪಿ.ದೇವರಾಜ್, ಶಿವೇಗೌಡ, ಬೆಳಗೀಹಳ್ಳಿ ರಮೇಶ್ ಇತರರು ಇದ್ದರು.