ಜಿಲ್ಲೆ

ವಿವಿಧೆಡೆ ಶ್ರೀರಾಮ ನವಮಿ ಆಚರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಶ್ರೀರಾಮ ನವಮಿ ಪ್ರಯುಕ್ತ ನಗರದ ವಿವಿಧೆಡೆ ಬುಧವಾರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.


ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ ಬೆಳಿಗ್ಗೆ ತತ್ವ ಕಲಶ ಹೋಮ, ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಹಾಮಂಗಳಾರತಿ ನಡೆಯಿತು. ನಂತರ ಬೆಳಗ್ಗೆ ೯ ಗಂಟೆಗೆ ದೇವಾಲಯದ ಆವರಣದಿಂದ ಉತ್ಸವ ಮೂರ್ತಿ ಹೊತ್ತ ಹೂವಿನ ಅಲಂಕೃತ ಮಂಟಪದೊಂದಿಗೆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಸಾಗಿತು. ಪೂಜಾ ಕೈಂಕರ್ಯ ನೆರವೇರಿದ ನಂತರ ಭಕ್ತಾದಿಗಳಿಗೆ ಕೊಸಂಬರಿ ಪಾನಕ ವಿತರಿಸಲಾಯಿತು.


ಪೇಟೆ ಶ್ರೀ ರಾಮ ಮಂದಿರ: ರಾಮ ಮಂದಿರದಲ್ಲಿ ಬೆಳಿಗ್ಗೆಯಿಂದ ತುಳಸಿ, ವಿಳ್ಯದೆಲೆ, ಹೂವು ಮತ್ತು ಹಣ್ಣಿನ ಅಲಂಕಾರಗಳನ್ನು ಭಕ್ತರು ಗುಡಿಗೆ ಸಲ್ಲಿಸಿದರು. ಸೀತಾಲಕ್ಷ್ಮಣ, ಶ್ರೀಆಂಜನಯ, ಮತ್ತು ಶ್ರೀರಾಮ ದೇವರಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಪೂಜೆ, ಮಹಾ ಗಣಪತಿ ಹೋಮ, ರಾಮತಾರಕ ಹೋಮ, ಮಹಾಮಂಗಳಾರತಿ ಮುಂತಾದ ಪೂಜಾ ವಿಧಿವಿಧಾನವನ್ನು ನಡೆಸಲಾಯಿತು.