ಜಿಲ್ಲೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಳಕಾದ ಶ್ರೀಗಳು

ಸರಗೂರು: ಅಸಂಖ್ಯಾತ ಹಿಂದುಳಿದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನೀಡಿದ ಕೊಡುಗೆ ಅಪಾರ ಎಂದು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.


ತಾಲೂಕಿನ ಬಿಡಗಲು ಗ್ರಾಮದ ಪಡುವಲು ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ ಪೌರ್ಣಮಿ ಪೂಜಾ ಕಾರ್ಯಕ್ರಮ, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತ್ಯುತ್ಸವ ಮತ್ತು ಶಿವಾನುಭವ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಹನ್ನೆರಡು ವರ್ಷವಿದ್ದಾಗ ಅವರನ್ನು ಮಠದ ಜಗದ್ಗುರು ಎಂದು ಹೆಸರಿಸಿದರು. ಸುತ್ತೂರು ಮಠಕ್ಕೆ ಅರ್ಹ ಉತ್ತರಾಧಿಕಾರಿ ಇದ್ದಾರೆ ಮತ್ತು ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಠವು ವೇಗವಾಗಿ ಬೆಳೆಯುತ್ತದೆ ಎಂದು ಜನರು ಸಂತೋಷಪಟ್ಟರು. ರಾಜೇಂದ್ರ ಸ್ವಾಮೀಜಿ ಮೈಸೂರಿಗೆ ಆಗಮಿಸಿದಾಗ ಮೈಸೂರು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಇದನ್ನು ಮನಗಂಡು ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿ ಎಂದು ಶಿಕ್ಷಣ ಸಂಸ್ಥೆ ಆರಂಭಿಸಿ ಲಕ್ಷಾಂತರ ಜನರಿಗೆ ಅಕ್ಷರ ದಾಸೋಹ ನೀಡಿದರು ಎಂದು ಸ್ಮರಿಸಿದರು.


ಪಡುವಲು ವಿರಕ್ತ ಮಠದ ಮಹದೇವ ಸ್ವಾಮಿಜಿ ಮಾತನಾಡಿ, ಶ್ರೀಗಳು ಜಾತಿ ವ್ಯವಸ್ಥೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಜೀವನಕ್ಕೆ ಜಾತಿ ಮತ್ತು ಸಮುದಾಯಗಳು ಅಡ್ಡಿಯಾಗಬಾರದು ಎಂದು ತೋರಿಸಿದರು. ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ಅವರು ಸ್ಥಾಪಿಸಿದ ಅನೇಕ ಶಿಕ್ಷಣ ಸಂಸ್ಥೆಗಳು ಹೆಣ್ಣು ಮಕ್ಕಳು, ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶಗಳನ್ನು ಒದಗಿಸಿದರು ಎಂದರು.


ಕಸಪಾ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಊಟ-ವಸತಿಗೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಶ್ರೀಗಳು ಅಂದಿನ ಕಾಲದಲ್ಲೇ ವಿದ್ಯಾರ್ಥಿನಿಲಯ ಆರಂಭಿಸಿ ಅವರ ಪಾಲಿಗೆ ಬೆಳಕಾದರು ಎಂದು ಹೇಳಿದರು.
ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಒಮ್ಮೆ ರಾಜೇಂದ್ರ ಶ್ರೀಗಳಿಗೆ ಕಾಶಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಕಾಶಿಯಲ್ಲಿಯೂ ಅಶಕ್ತ ವಿದ್ಯಾರ್ಥಿಗಳ ಹೋರಾಟ ಗಮನಿಸಿದರು. ಅಂದೇ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ, ಆಹಾರ ಮತ್ತು ವಸತಿ ನೀಡುವ ಸಂಕಲ್ಪ ಮಾಡಿದರು ಎಂದು ತಿಳಿಸಿದರು.
ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಗುರುಸ್ವಾಮಿ, ಪಿ.ಕೆ.ಶಿವರಾಜು, ಭುಜಂಗಪ್ಪ ಮನುಗನಹಳ್ಳಿ, ಡಿ.ಎಂ.ಶಿವಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನಿರ್ದೇಶಕ ಗಿರಿ ಕುಮಾರ್, ಉಮಾ ಕೆ.ಪಿ.ಮಾದಪ್ಪ, ಶ್ರುತಿ ಮಹದೇವಸ್ವಾಮಿ, ಮಧು, ಅಹಲ್ಯಾ ಹಾಜರಿದ್ದರು.