ಹುಣಸೂರು ತಾಲೂಕು ಗಾವಡಗೆರೆಯ ಶ್ರೀ ಗುರುಲಿಂಗಜಂಗಮದೇವರ ಮಠದಲ್ಲಿ ಸುವರ್ಣ ಮಹೋತ್ಸವ ಸಮಾರಂಭದ ಕುರಿತಾದ ಆಹ್ವಾನ ಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಹರವೆ ಶ್ರೀಧರ್, ಶಿವಕುಮಾರ್, ಶಿವಣ್ಣ, ಜಗದೀಶ್ ಇದ್ದಾರೆ. 
ಜಿಲ್ಲೆ

13 ಮತ್ತು 14ರಂದು ಶ್ರೀ ನಟರಾಜ ಸ್ವಾಮೀಜಿಗೆ ಪಟ್ಟಾಧಿಕಾರ

ಹುಣಸೂರು: ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗಜಂಗಮ ದೇವರಮಠದ ಶ್ರೀ ನಟರಾಜ ಸ್ವಾಮೀಜಿ ಅವರ 50ನೇ ವರ್ಷದ ಚರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಸಮಾರಂಭ ಶಾಸಕ ಜಿ.ಡಿ.ಹರೀಶ್‌ಗೌಡರ ಅಧ್ಯಕ್ಷತೆಯಲ್ಲಿ ಫೆ.13 ಮತ್ತು 14ರಂದು ಆಯೋಜಿಸಲಾಗಿದೆ ಎಂದು ಶ್ರೀಮಠದ ಭಕ್ತರು ಮತ್ತು ಉದ್ಯಮಿ ಹರವೆ ಶ್ರೀಧರ್ ತಿಳಿಸಿದರು.

ಶ್ರೀಗಳು ಮಠದ ಪಟ್ಟಾಧಿಕಾರ ವಹಿಸಿದ ನಂತರ ಶ್ರೀಮಠದ ಸವಾರ್ಂಗೀಣ ಅಭಿವೃದ್ಧಿಗಾಗಿ ಸಮಾಜದ ಎಲ್ಲ ವರ್ಗದವರನ್ನು ಸಮನಾಗಿ ಸ್ವೀಕರಿಸಿ ಜಾತ್ಯತೀತ ತಳಹದಿಯಲ್ಲಿ ಮಠದ ಸೇವಾ ಕಾರ್ಯ ನಡೆಸಿದ್ದು, ಶ್ರೀಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಅಕ್ಷರ ದಾಸೋಹ ನೀಡಲಾಗುತ್ತಿದೆ. ಆದಿವಾಸಿ ಗಿರಿಜನರ ಮಕ್ಕಳಿಂದ ಆರಂಭಗೊಂಡು ಉತ್ತರ ಕರ್ನಾಟಕದ ಭಾಗದ ಕೃಷಿಕ ಕುಟುಂಬ ಒಳಗೊಂಡು ಬಡಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮ ವಿವರ:

ಫೆ 13ರ ಬೆಳಗ್ಗೆ 10.30ಕ್ಕೆ ವಾಟಾಳು ಸೂರ್ಯಸಿಂಹಾಸನಾ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಷಟ್‌ಸ್ಥಲ ಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕುಂದೂರು ಮಠದ ಶ್ರೀ ಶರಶ್ಚಂದ್ರ ಸ್ವಾಮೀಜಿ ಆಶಯದ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆಯೋಜನೆಗೊಂಡಿರುವ ಧಾರ್ಮಿಕ ಸಭೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಮೂರು ಸಾವಿರ ಕಂಬ ಮಠದ ಹುಬ್ಬಳ್ಳಿ ಗುರುಸಿದ್ದರಾಜ ಯೋಗೇಂದ್ರ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವ ವೆಂಕಟೇಶ್,ಈಶ್ವರ್ ಖಂಡ್ರೆ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್, ಯತೀಂದ್ರ ಸಿದ್ದರಾಮಯ್ಯ ರವಿಶಂಕರ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭಾಗವಹಿಸಲಿದ್ದಾರೆ.

ಫೆ.14 ರಂದು ಬೆಳಗ್ಗೆ ಮಲ್ಲನಮೂಲೆ ಕಂಬಳೀಶ್ವರ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ಅವರಿಂದ ಧ್ವಜಾರೋಹಣ ನಡೆಯಲಿದ್ದು, ಮೋಟಗಿ ಮಠದ ಶ್ರೀ ಪ್ರಭುಚೆನ್ನಬಸವ ಸ್ವಾಮೀಜಿ ಆಶಯದ ನುಡಿಗಳನ್ನಾಡಲಿದ್ದರೆ. 10.30ಕ್ಕೆ ಧಾರ್ಮಿಕ ಸಭೆ ಆಯೋಜನೆಗೊಂಡಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮುಂತಾದವರು ಭಾಗವಹಿಸಲಿದ್ದಾರೆ. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಭಾರತದ ವಿಜಯಪತಾಕೆ ಹಾರಿಸಿದ ತೀ.ನರಸೀಪುರದ ಪ್ರತಿಭೆ ಚೈತ್ರಾ ಅವರನ್ನು ಸನ್ಮಾನಿಸಲಾಗುವುದು. ಮಠದ ಆವರಣದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವದ ಅಂಗವಾಗಿ ಫೆ.13ರಂದು ಸಂಜೆ ಮೆಲೋಡಿ ಕಿಂಗ್ ರಾಜೇಶ್‌ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಗದೀಶ್, ಶಿವಣ್ಣ, ಶಿವಕುಮಾರ್ ಇದ್ದರು.