ಜಿಲ್ಲೆ

ಶ್ರೀಮೈಲಾರಲಿಂಗೇಶ್ವರ ಕಾರಣಿಕ ಇಂದು

Haveri

ವಿಜಯವಾಣಿ ವಿಶೇಷ ಹಾವೇರಿ

ಸದ್ದಲೇ…

ಈ ಒಂದು ಶಬ್ದವನ್ನು ಬಿಲ್ಲನೇರಿರುವ ಗೊರವಪ್ಪ ನುಡಿಯುತ್ತಿದ್ದಂತೆಯೇ ಅಲ್ಲಿ ಸೇರಿರುವ ಲಕ್ಷಾಂತರ ಜನರ ಮಧ್ಯೆ ಒಂದು ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸುತ್ತದೆ.

ಇದು ಪ್ರತಿವರ್ಷ ಮೈಲಾರದಲ್ಲಿ ನಡೆಯುವ ಮೈಲಾರಲಿಂಗೇಶ್ವರನ ಕಾರಣಿಕದ ಸಮಯದಲ್ಲಿ ಕಂಡುಬರುವ ದೃಶ್ಯ. ಪ್ರತಿವರ್ಷ ಭರತ ಹುಣ್ಣಿಮೆಯಿಂದ ಮೈಲಾರಲಿಂಗೇಶ್ವರನ ಜಾತ್ರೆ ಆರಂಭಗೊಳ್ಳುವುದು. ವರ್ಷದ ಭವಿಷ್ಯವಾಣಿಯೆಂದೇ ಜನನಿತವಾಗಿರುವ ಗೊರವಪ್ಪ ಹೇಳುವ ಮೈಲಾರಲಿಂಗನ ಕಾರಣಿಕ ಫೆ. 11ರಂದು ಸಂಜೆ ನಡೆಯಲಿದೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಮೈಲಾರದಲ್ಲಿರುವ ಮೈಲಾರಲಿಂಗೇಶ್ವರನ ಕಾರಣಿಕ ಕೇಳಲು ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಮೈಲಾರಕ್ಕೆ ಆಗಮಿಸುತ್ತಿದ್ದಾರೆ. ಮೈಲಾರಲಿಂಗನ ಜಾತ್ರೆಗೆ ಹಾವೇರಿ ಜಿಲ್ಲೆಯ ಲಕ್ಷಾಂತರ ಭಕ್ತರು ತೆರಳುವುದು ವಿಶೇಷವಾಗಿದೆ. ಜಾತ್ರೆಗೆ ಬರುವ ಭಕ್ತರಿಂದ ಏಳು ಕೋಟಿ, ಏಳು ಕೋಟಿಗೋ, ಛಾಂಗ್​ವುಲೋ, ಛಾಂಗ್​ವುಲೋ ಎಂಬ ಉದ್ಘೋಷ ಮೊಳಗುತ್ತದೆ.

ವಿಶೇಷ ಕಾರಣಿಕ: ಮೈಲಾರಲಿಂಗನ ಕಾರಣಿಕ ರಾಜ್ಯದಲ್ಲಷ್ಟೆ ಅಲ್ಲ ಹೊರ ರಾಜ್ಯದಲ್ಲಿಯೂ ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಜನಸಾಗರದ ಮಧ್ಯೆ ಮೈಲಾರ ಬಳಿಯ ಡೆಂಕನಮರಡಿಯಲ್ಲಿ ಹತ್ತಾರು ಅಡಿಗಳ ಬಿಲ್ಲನ್ನೇರುವ ಗೊರವಪ್ಪ ಆಕಾಶದತ್ತ ಮುಖ ಮಾಡಿ ‘ಸದ್ದಲೇ’ ಎಂದ ಕೂಡಲೆ ಇಡೀ ವಾತಾವರಣದಲ್ಲಿ ಮೌನ ಆವರಿಸುತ್ತದೆ. ಈ ಸಮಯದಲ್ಲಿ ಗೊರವಪ್ಪ ವರ್ಷದ ಭವಿಷ್ಯವಾಣಿ ನುಡಿಯುತ್ತ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ. ಹೀಗೆ ಬೀಳುವ ಗೊರವಪ್ಪನನ್ನು ಕೆಳಗಿರುವವರು ಕಂಬಳಿಯಲ್ಲಿ ಹಿಡಿದುಕೊಳ್ಳುತ್ತಾರೆ. ಬಿಲ್ಲಿನಿಂದ ಬೀಳುವ ಮುನ್ನ ಗೊರವಪ್ಪ ನುಡಿದ ವಾಕ್ಯಗಳೇ ಕಾರಣಿಕವಾಗಿರುತ್ತದೆ.

ಸಾರಿಗೆ ಸಂಸ್ಥೆ ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಸವಣೂರ, ಬ್ಯಾಡಗಿ ಸೇರಿ ಎಲ್ಲ ತಾಲೂಕು ಕೇಂದ್ರಗಳಿಂದ ಮೈಲಾರ ಜಾತ್ರೆಗೆ ಭರತ ಹುಣ್ಣಿಮೆಯಿಂದಲೇ ವಿಶೇಷ ವಾಹನಗಳ ಸೌಲಭ್ಯ ಕಲ್ಪಿಸಿದೆ. ಜೊತೆಗೆ ಭಕ್ತರು, ಚಕ್ಕಡಿ, ಟ್ರ್ಯಾಕ್ಟರ್, ಬೈಕ್, ಕಾರು ಸೇರಿ ವಿವಿಧ ವಾಹನಗಳಲ್ಲಿ ಜಾತ್ರೆಗೆ ಬರುತ್ತಾರೆ. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮೈಲಾರಲಿಂಗ ದರ್ಶನ ಪಡೆಯುತ್ತಾರೆ.

ಐದು ದಿನಗಳ ಜಾತ್ರೆ: ಮೈಲಾರ ಜಾತ್ರೆಯು ಭರತ ಹುಣ್ಣಿಮೆಯಿಂದ ಐದು ದಿನಗಳ ಕಾಲ ಸಂಭ್ರಮದಿಂದ ನಡೆಯುತ್ತದೆ. ಜಾತ್ರೆಗೆಂದು ಚಕ್ಕಡಿಗಳಲ್ಲಿ ಬರುವ ಭಕ್ತರು ಐದು ದಿನಗಳ ಕಾಲ ವಾಸ್ತವ್ಯ ಹೂಡಿ ಹಬ್ಬ ಮಾಡುತ್ತಾರೆ. ವರ್ಷಪೂರ್ತಿ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ವಸ್ತುಗಳನ್ನು ರೈತರು ಇಲ್ಲಿಯೇ ಖರೀದಿಸುವ ಪದ್ಧತಿಯೂ ಇದೆ.

ವಿಶಿಷ್ಟ ಆಚರಣೆಗಳು: ಕಾರಣಿಕದ ಜೊತೆಗೆ ಮೈಲಾರಲಿಂಗ ಜಾತ್ರೆ ಇನ್ನೂ ಅನೇಕ ವಿಶಿಷ್ಟ ಆಚರಣೆಗಳಿಂದಲೂ ಗಮನಸೆಳೆಯುತ್ತದೆ. ಭಕ್ತರು ತಾವು ಅಂದುಕೊಂಡ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಸಾಂಪ್ರದಾಯಿಕ ಪದ್ಧತಿಯಂತೆ ದೋಣಿ ತುಂಬುತ್ತಾರೆ. ಗೊರವಪ್ಪನ ವೇಷ ಧರಿಸಿ ಸೇವೆ ಸಲ್ಲಿಸುತ್ತಾರೆ. ಸರಪಳಿ ಪವಾಡ, ಕಾಲಿನ ಹಿಂಬಡಿಗೆ ಕಟ್ಟಿಗೆಗೂಟ ಬಡೆದುಕೊಳ್ಳುವುದು, ಛಾಟಿ ಏಟು ಹಾಕಿಕೊಳ್ಳುವುದು, ದೀಡ್ ನಮಸ್ಕಾರ, ದಿವಿಟಿಗೆ ಸೇವೆ, ಕುದುರೆ ಸೇವೆ, ನಾಲಿಗೆಗೆ ಶಸ್ತ್ರ ಸೇರಿ ಅನೇಕ ಆಚರಣೆಗಳನ್ನು ಭಕ್ತರು ನಡೆಸುತ್ತಾರೆ.

ಹಿಂದಿನ ವರ್ಷಗಳ ಕಾರಣಿಕ ನುಡಿಗಳು: ತುಂಬಿದ ಕೊಡ ಮೂರು ಭಾಗವಾಗಿತಲೇ ಪರಾಕ್..!, ಮುತ್ತಿನ ರಾಶಿ ಹೋಳಾದೀತಲೇ ಪರಾಕ್..!, ಸೃಷ್ಟಿಸಿರಿ ನಾಶವಾದೀತಲೇ ಪರಾಕ್..!, ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್..!, ಆಕಾಶಕ್ಕೇ ಸಿಡಿಲು ಬಡದಿತಲೇ ಪರಾಕ್..! ಹುಟ್ಟಿದ ಕೂಸು ಕಷ್ಟಪಟ್ಟು, ಸುಖ ಪಟ್ಟೀತಲೇ ಪರಾಕ್..!, ಮಳಿ-ಬೆಳಿ ಸಂಪಾದೀತಲೇ ಪರಾಕ್..! ಇವು ಮೈಲಾರಲಿಂಗನ ಕಾರಣಿಕದ ನುಡಿಗಳು. ಎರಡರಿಂದ ಮೂರು ಶಬ್ದಗಳ ಈ ಕಾರಣಿಕವನ್ನು ಅನೇಕರು ಅನೇಕ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ. ರೈತರಿಗಂತೂ ಮೈಲಾರಲಿಂಗ ಕಾರಣಿಕ ಬಹುದೊಡ್ಡ ವಾಣಿ. ಇದರ ಪ್ರಕಾರವೇ ಅನೇಕ ರೈತರು ಮುಂದಿನ ವರ್ಷದ ಮಳೆ ಬೆಳೆಗಳ ಲೆಕ್ಕಾಚಾರ ಹಾಕುತ್ತಾರೆ. ಇನ್ನು ಕೆಲವರು ರಾಜಕೀಯವಾಗಿಯೂ ಇದನ್ನು ಅರ್ಥೈಸಿಕೊಳ್ಳುವುದುಂಟು.