ಜಿಲ್ಲೆ

ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನ ದಕ್ಷಿಣ ಭಾರತದಲ್ಲೇ ಒಂದೇ

ಗೋಣಿಕೊಪ್ಪಲು: ಜಿಲ್ಲೆಯ ಪೊನ್ನಂಪೇಟೆ ತಾಲೂಕು ಬಾಡಗರಕೇರಿಯಲ್ಲಿರುವ ಶ್ರೀಮೃತ್ಯುಂಜಯ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಏಕೈಕ ಮೃತ್ಯುಂಜಯ ದೇವಸ್ಥಾನವಾಗಿದೆ.

ಕೊಡಗು ಜಿಲ್ಲೆಯಲ್ಲಿ ಮೃತ್ಯುಂಜಯ ದೇವಸ್ಥಾನ ಹೆಸರಿನಲ್ಲಿ ಹಲವಾರು ಗೊಂದಲಗಳು ಕಂಡುಬಂದಿದ್ದು ಇತ್ತೀಚೆಗೆ ಮಡಿಕೇರಿ ಸಮೀಪ ಕಟ್ಟೆಮಾಡುವಿನಲ್ಲಿ ಮಹಾದೇವರ ದೇವಸ್ಥಾನಕ್ಕೆ ಶ್ರೀಮಹಾ ಮೃತ್ಯುಂಜಯ ದೇವಸ್ಥಾನವೆಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲಕ್ಕೂ ಬಾಡಗರ ಕೇರಿಯ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ. ಇವೆರಡು ದೇವಸ್ಥಾನಗಳು ಒಂದೇ ಆಡಳಿತ ಮಂಡಳಿಯಲ್ಲ. ಬದಲಿಗೆ ಸಹೋದರ ಸಂಸ್ಥೆಯೂ ಅಲ್ಲ. ಇವೆರಡೂ ಒಂದೇ ದೇವಸ್ಥಾನ ಎನ್ನುವ ಭಾವನೆ ಭಕ್ತಾದಿಗಳಲ್ಲಿ ಮೂಡಿದ್ದು ಇದು ಸರಿಯಲ್ಲ ಎಂದು ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದಲ್ಲಿ ಯಾವುದೇ ಗೊಂದಲಗಳಿಲ್ಲ. ಭಕ್ತಾದಿಗಳು ಎಂದಿನಂತೆ ತಮ್ಮ ಪೂಜೆ, ಹರಕೆ, ಪ್ರಾರ್ಥನೆಗೆ ಅವಕಾಶವಿದೆ. ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನ ಸುಮಾರು ಸಾವಿರ ವರ್ಷಗಳಿಗಿಂತ ಪುರಾತನವಾಗಿದ್ದು ಇಲ್ಲಿ ಅನಾದಿ ಕಾಲದ ಪದ್ಧತಿಯಂತೆ ಪೂಜೆ ಹಾಗೂ ಆಚರಣೆಗಳು ನಡೆಯುತ್ತಾ ಬರುತ್ತಿವೆ. ಈ ದೇವಸ್ಥಾನ ಸಾವಿರ ವರ್ಷಗಳಿಗಿಂತ ಹಿಂದೆಯೇ ಮೃತ್ಯುಂಜಯ ದೇವಸ್ಥಾನವಾಗಿಯೇ ಸ್ಥಾಪನೆಯಾಗಿದ್ದು ಈಗಲೂ ಅದೇ ಹೆಸರಿನಲ್ಲಿ ನಡೆಯುತ್ತಿದೆ. ಬೇರೆ ದೇವಸ್ಥಾನದಂತೆ ಇತ್ತೀಚೆಗೆ ಹೆಸರು ಬದಲಾವಣೆಯನ್ನು ಮಾಡಿಕೊಂಡು ಭಕ್ತಾದಿಗಳಿಗೆ ದೇವರ ಹೆಸರಿನಲ್ಲಿ ಗೊಂದಲ ಮಾಡಿಲ್ಲ.

ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದಲ್ಲಿ ನಡೆಯುತ್ತಿರುವ ವಿದ್ಯಾಮಾನಕ್ಕೂ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಪರವಾಗಿ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ ಹಾಗೂ ತಕ್ಕಮುಖ್ಯಸ್ಥರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.