ಜಿಲ್ಲೆ

ನಾಲ್ವಡಿ, ಸರ್‌ಎಂವಿ, ಇಸ್ಮಾಯಿಲ್ ತ್ರಿರತ್ನಗಳು: ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅಭಿಮತ

reportermys

ಮಂಡ್ಯ: ಮೈಸೂರು ಸಂಸ್ಥಾನದಲ್ಲಿ ತಮ್ಮದೇ ಆದ ರೀತಿಯಲ್ಲಿ ಜನೋಪಯೋಗಿ ಕಾರ್ಯ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರು ನಾಡಿನ ತ್ರಿರತ್ನಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಬಣ್ಣಿಸಿದರು.

ನಗರದ ಕಸಾಪ ಭವನದ ಸಂಚಿ ಹೊನ್ನಮ್ಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಿರ್ಜಾ ಇಸ್ಮಾಯಿಲ್ ಅವರ 137 ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಮೂವರು ವ್ಯಕ್ತಿಗಳು ಜಿಲ್ಲೆಯ ಹಸಿರುಕ್ರಾಂತಿಗೆ ಮೂಲ ಕಾರಣರಾಗಿದ್ದಾರೆ. ಇವರು ನೀಡಿದ ಕೊಡುಗೆ ಮುಂದಿನ ತಲೆಮಾರಿಗೆ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುತ್ತವೆ. ನಾಲ್ವಡಿ ಅವರು ಸ್ಥಾಪಿಸಿದ ಕಸಾಪಗೆ ನೀರೆರೆದು ಪೋಷಿಸಿದವರು ವಿಶ್ವೇಶ್ವರಯ್ಯ ಮತ್ತು ಇಸ್ಮಾಯಿಲ್. ಪರಿಷತ್ ನಿವೇಶನಕ್ಕೆ ಮಿರ್ಜಾ ಇಸ್ಮಾಯಿಲ್ ಹಣವನ್ನು ಮಂಜೂರು ಮಾಡಿಕೊಟ್ಟು ಪ್ರತಿವರ್ಷ ದೇಣಿಗೆ ನೀಡುತ್ತಿದ್ದರು. ಕಸಾಪ ಜತೆಗೆ ಬೇರೆ ಬೇರೆ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಮಿರ್ಜಾ ಇಸ್ಮಾಯಿಲ್ ಅವರ ಆದರ್ಶ, ತತ್ವ, ಸೇವೆಯ ಮಹತ್ವವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿದರು. ಧನಂಜಯ ದರಸಗುಪ್ಪೆ, ಬಿ.ಎಂ.ಅಪ್ಪಾಜಪ್ಪ, ಹರ್ಷ ವಿ.ಪಣ್ಣೆದೊಡ್ಡಿ, ಬಿ.ಎಸ್.ಬೋರೇಗೌಡ, ಎಂ.ಆರ್.ಮಂಜು ಮುತ್ತೇಗೆರೆ, ಕೃಷ್ಣ, ನಾಗರಾಜು, ಸುಜಾತಾ ಕೃಷ್ಣ ಇತರರಿದ್ದರು.