ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಫೆ.4ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಕೆ.ಎಸ್ ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಲಕ್ಷ್ಮೀಶ ಭಾರದ್ವಾಜ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
4ರಂದು ಗಣಪತಿ ಹೋಮ, ನವಕಲಶಾಭಿಷೇಕ, ಅಲಂಕಾರ ಪೂಜೆ, ತುಲಾಭಾರ, ರಥ ಸಂಪ್ರೋಕ್ಷಣೆ, ಮಹಾಪೂಜೆ, ರಥರೋಹಣ, ಪಲ್ಲಪೂಜೆ, ಅನ್ನಸಂತರ್ಪಣೆ, ಭಜನೆ, ದೀಪಾರಾಧನೆ, ರಥೋತ್ಸವ, ನರ್ತನ ಬಲಿ, ಕೆರೆದೀಪ, ಪಚ್ಚಡಸೇವೆ, ಕಟ್ಟೆಪೂಜೆ, ವಸಂತ ಮಂಟಪದಲ್ಲಿ ಪೂಜೆ, ವಸಂತೋತ್ಸವ ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ. ಬುಧವಾರ ಸಂರಕ್ಷಣೆ, ಮಧ್ಯಾಹ್ನ ಹರಿವಾಣ ನೈವೇದ್ಯ ಸಂತರ್ಪಣೆ, ಭಜನೆ, ದೀಪಾರಾಧನೆ, ರಂಗ ಪೂಜೆ, ಉತ್ಸವ ಸೇವೆ ನಡೆಯಲಿದೆ. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಭಟ್, ಕೆ.ನಾರಾಯಣ ಭಟ್, ಚಂದ್ರಶೇಖರ ಬಾಯರಿ, ಯೋಗಿಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ ಪೂಜಾರಿ, ಶೇಖರ್ ಗೌಡ, ರೇಣುಕ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಉಪಸ್ಥಿತರಿರುವರು.
ಐದು ಶತಮಾನಗಳ ಹಿಂದೆ ಶ್ರೀಸೋದೆ ಮಠದ ಯತಿವರೇಣ್ಯ ಶ್ರೀವಾದಿರಾಜ ತೀರ್ಥರು ಶ್ರೀ ರುಕ್ಕಿಣಿ ಸತ್ಯಭಾಮಾ ಸಹಿತ ಶೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪನೆ ಮಾಡಿದರೆಂಬ ಇತಿಹಾಸವಿದೆ. ಚಾಲುಕ್ಯರ ಶೈಲಿಯಲ್ಲಿ ಪಂಚಲೋಹದ ಮೂರ್ತಿಗಳು ನಿರ್ಮಾಣವಾಗಿವೆ.
ಈ ದೇಗುಲದ ಪ್ರಾಕಾರದಲ್ಲಿ ನೆಲೆಯಾದ ಶ್ರೀಸತ್ಯದೇವತೆ ಮತ್ತು ಹೊರ ಆವರಣದಲ್ಲಿರುವ ನಾಗದೇವರು ಮತ್ತು ತುಸು ದೂರದಲ್ಲಿರುವ ಕಾಳರಾಹು ಕ್ಷೇತ್ರ ಸಂರಕ್ಷಣೆಯ ಕಾರಣಿಕ ಸನ್ನಿಧಾನಗಳು. ಪುರಾತನ ಕಾಲದಲ್ಲಿ ಹೆಚ್ಚು ಕಬ್ಬನ್ನೇ ಬೆಳೆಯುತ್ತಿದ್ದರಿಂದ ಈ ಸ್ಥಳಕ್ಕೆ ಕಬ್ಬಿನಾಲೆಯೆಂಬ ಹೆಸರು ದೊರೆತ ಉಲ್ಲೇಖವಿದೆ.
ಇತಿಹಾಸ ಪ್ರಸಿದ್ಧ ಕಬ್ಬಿನಾಲೆ ಕೆಳಮಠ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಐದು ಶತಮಾನಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅನೇಕ ಊರುಗಳಿಂದ ಜನರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಾಘವೇಂದ್ರ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯ.