ಆನೇಕಲ್ : ತಾಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ಚಿಕ್ಕಹೊಸಹಳ್ಳಿಯಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ಮಂಗಳವಾರ ಅಗ್ನಿಕೊಂಡ ಮಹೋತ್ಸವ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪುಷ್ಪಾಲಂಕಾರ, ಬೆಲ್ಲದಾರತಿ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಶ್ರೀ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಹೊಳೆ ಮೆಟ್ಟಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾತ್ರೆಯ ಪ್ರಯುಕ್ತ ಹೆಜ್ಜೆ ಹೆಜ್ಜೆಗೂ ತೆಂಗಿನಕಾಯಿ ಹೊಡೆಯುವ ಮೂಲಕ ಮೆರವಣಿಗೆ ನಡೆಸಿ ಮಧ್ಯಾಹ್ನ ಶ್ರೀಮಹದೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅಗ್ನಿಕೊಂಡ ಪ್ರವೇಶ ಮಾಡಲಾಯಿತು. ಅರ್ಚಕ ಶಂಕರಪ್ಪ ಅಗ್ನಿಕೊಂಡ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಜಯೂಷ ಮಾಡುವ ಮೂಲಕ ಅಗ್ನಿಕೊಂಡ ಪ್ರವೇಶಿಸಿದರು.
ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರಿಗೆ ರಾಗಿ ಮುದ್ದೆ, ಹಲಸಿನಕಾಯಿ ಕಾಳ ಸಾರು ಅನ್ನದಾಸೋಹ ಆಯೋಜಿಸಲಾಗಿತ್ತು. ಅಚ್ಚುತ್ ರಾಜ್, ಸರ್ವೇ ಇಲಾಖೆಯ ಚಂದ್ರಶೇಖರ್, ಶಾಮ್ ರಾಜ್, ಚಿಕ್ಕಹೊಸಹಳ್ಳಿ ನಾಗೇಶ್, ಗೋವಿಂದರಾಜು, ಮುನಿರೆಡ್ಡಿ ಇದ್ದರು.
ಆಯ ತಪ್ಪಿ ಕೊಂಡಕ್ಕೆ ಬಿದ್ದ ಭಕ್ತ : ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೊಂಡದ ಮೇಲೆ ನಡೆಯುವಾಗ ಭಕ್ತರೊಬ್ಬರು ಆಯ ತಪ್ಪಿ ಬಿದ್ದು ಗಾಯಗೊಂ ಡಿದ್ದಾರೆ. ದೇವಸ್ಥಾನದಿಂದ ಅರ್ಚಕರು ಕೊಂಡವನ್ನು ಹಾಯ್ದ ನಂತರ ಭಕ್ತರು ನುಗ್ಗಿದರು, ಈ ಸಂದರ್ಭದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಆದರೂ ಸಂಪೂರ್ಣ ಹರಕೆ ತೀರಿಸಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.