ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಸಮಾರೋಪದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ನೇತೃತ್ವದಲ್ಲಿ, ರಾಂ ಎಲ್ಲಂಗಳ ವಿರಚಿತ ಶ್ರೀ ಮಧುಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಏ.7ರಂದು ಮಧ್ಯಾಹ್ನ 2.30ರಿಂದ ನಡೆಯಲಿದೆ. ಪರಶುರಾಮ ಸೃಷ್ಟಿ, ಧರ್ಮಪಾಲ ಮಹಾರಾಜನ ಅಶ್ವಮೇಧ ಯಾಗ, ವಿಘ್ನೇಶನ ಅನುಗ್ರಹ, ಮದರುವಿನಿಂದಾಗಿ ಮದನಂತೇಶ್ವರ ಲಿಂಗ ಸಿಗುವುದು, ಅರಸನಿಂದ ಕ್ಷೇತ್ರ ನಿರ್ಮಾಣ, ಮದನಂತೇಶ್ವರ ಸಿದ್ಧಿವಿನಾಯಕ ದೇವರ ಆರಾಧಕ ಕುಂಬಳೆ ಸೀಮೆಯ ಅರಸ ಜಯಸಿಂಹನ ಆಳ್ವಿಕೆ, ಟಿಪ್ಪು ಸುಲ್ತಾನ್ ಕುಂಬಳೆ ಸೀಮೆಗೆ ದಾಳಿ, ಮದನಂತೇಶ್ವರ ಸನ್ನಿಧಿಯಲ್ಲಿ ಮನ ಪರಿವರ್ತನೆ ಮೊದಲಾದ ಭಾಗಗಳು ಸೇರಿವೆ. ಈ ಹಿಂದೆ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿದ್ವಾನ್ ಡಿ.ವಿ.ಹೊಳ್ಳ ಅವರ ಕೃತಿಯ ಮಧುಪುರ ಮಹಾತ್ಮೆ ಪ್ರದರ್ಶನಗೊಂಡು ಜನ ಮೆಚ್ಚುಗೆಗಳಿಸಿತ್ತು.