ಜಿಲ್ಲೆ

ಸಡಗರದಿಂದ ಜರುಗಿದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ರಥೋತ್ಸವ

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆಯ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿ ರಥೋತ್ಸವ ಶನಿವಾರ ಸಡಗರ, ಸಂಭ್ರಮದಿಂದ ನೆರವೇರಿತು.


ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಸೂರ್ಯಮಂಡಲೋತ್ಸವ, ನಿತ್ಯಾರಾಧನೆ, ಕೃಷ್ಣಗಂಧೋತ್ಸವ ನಡೆಸಲಾಯಿತು. ಆ ನಮತರ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.


ಬೆಳಗ್ಗೆ 11.15ಕ್ಕೆ ಪುಷ್ಯ ನಕ್ಷತ್ರದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತ ರಥಬೀದಿಯಲ್ಲಿ ತೇರನ್ನು ಎಳೆದರು. ವಿದ್ವಾನ್ ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಆರ್ಚಕ ಎಂ.ಎಸ್.ಜನಾರ್ದನ ಹಾಗೂ ಸಹಾಯಕರು ಜಾತ್ರಾ ಮಹೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.


ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು. ವಸಂತಸೇವೆ, ಪ್ರಸಾದ ವಿನಿಯೋಗ ನಡೆಸಲಾಯಿತು. ಹಳೇಕೋಟೆ ಬೆಟ್ಟದ ಮೇಲಿನ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಪೂಜಾ ಮಹೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ, ಉಪ ತಹಸೀಲ್ದಾರ್ ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ, ಡಾ. ಸೂರಜ್ ರೇವಣ್ಣ, ಗ್ರಾಮದ ಹಿರಿಯರಾದ ಶೆಟ್ಟಿಗೌಡ, ಸುಂದರೇಶ್, ಸುಬ್ಬರಾಜು, ಜಯಪ್ರಕಾಶ್, ರಮೇಶ್, ಚಂದ್ರು, ಸುಶೀಲಮ್ಮ ಇತರರಿದ್ದರು.