ಮಂಡ್ಯ: ಪಾಂಡವಪುರ ಸಾವಯವ ಕೃಷಿ ಮೂಲಕ ಬೆಳೆಯುವ ಕಬ್ಬಿನಿಂದ ಸಾವಯವ ಬೆಲ್ಲ ತಯಾರಿಸಿ ಮಾರುಕಟ್ಟೆ ಕಂಡುಕೊಂಡಿರುವ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ರೈತ ದೇವೇಗೌಡರ ಆಲೆಮನೆ ಹಾಗೂ ಜಮೀನಿಗೆ ಶ್ರೀಲಂಕಾದ ರೈತರು ಶುಕ್ರವಾರ ಭೇಟಿ ನೀಡಿ ಸಾವಯವ ಕೃಷಿ ಪದ್ಧತಿ ಹಾಗೂ ಬೆಲ್ಲ ತಯಾರಿಕೆ ಬಗ್ಗೆ ಅಧ್ಯಾಯನ ನಡೆಸಿದರು.
ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ರೈತ ದೇವೇಗೌಡ ಹಲವು ದಶಕಗಳಿಂದ ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆ ಮಾಡುತ್ತಿದ್ದು, ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಲಂಕಾ ರೈತರಾದ ರಾಣಿಯಮ್ಮ, ಅನುಕ ಹಾಗೂ ಶ್ರಮಿಳಾ ಸೇರಿದಂತೆ ಸುಮಾರು 13 ಪ್ರವಾಸಿ ರೈತರು ದೇವೇಗೌಡರ ಅಲೆಮನೆಗೆ ಭೇಟಿ ನೀಡಿ ಕೃಷಿ ಪದ್ಧತಿ ಹಾಗೂ ಬೆಲ್ಲ ತಯಾರಿಕೆಗೆ ಬಳಸುವ ಪದಾರ್ಥಗಳು ಹಾಗೂ ಬೆಲ್ಲಕ್ಕೆ ಇರುವ ಮಾರುಕಟ್ಟೆ ಇತ್ಯಾದಿ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸಾವಯವ ಕೃಷಿ, ಬೆಲ್ಲ ತಯಾರಿಕೆ ಹಾಗೂ ಮಾರುಕಟ್ಟೆಯ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಸಾವಯವ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಮಿಶ್ರಣ ಮಾಡದೆ, ಬೆಲ್ಲತಯಾರಿಕೆ ಮಾಡುವುದು ಹೇಗೆ? ತಯಾರಿಸಿದ ಬೆಲ್ಲದ ಸಂರಕ್ಷಣೆ ಹಾಗೂ ಮಾರಾಟ ಮಾಡುವ ವಿಧಾನಗಳ ವಿವರ ಪಡೆದುಕೊಂಡರು. ಬಳಿಕ ಸಾವಯವ ಬೆಲ್ಲ ಸವಿದ ರೈತರು ದೇವೇಗೌಡರ ಸಾವಯವ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಳೆ ಎಲೆ ಊಟ: ಶ್ರೀಲಂಕಾದಿಂದ ಆಗಮಿಸಿದ ರೈತರಿಗೆ ಹಿಂದು ಸಂಪ್ರದಾಯದಂತೆ ಬಾಳೆ ಎಲೆಯಲ್ಲಿ ಸಸ್ಯಹಾರಿ ಊಟ ಬಡಿಸಲಾಯಿತು. ಬಳಿಕ ದೇವೇಗೌಡರ ಪತ್ನಿ ಕೆಂಪಮ್ಮ ಆಗಮಿಸಿದ ರೈತ ಮಹಿಳೆಯರಿಗೆ ಹಿಂದು ಸಂಪ್ರದಾಯದಂತೆ ಅರಿಶಿಣ, ಕುಂಕುಮ, ಬಳೆ, ಹೂ, ರವಿಕೆ ಪೀಸ್ ಹಾಗೂ ತೆಂಗಿನಕಾಯಿ ಕೊಟ್ಟು ಅಭಿನಂಧಿಸಿದರು. ಭತ್ತ ಬೆಳೆಯಲು ಪ್ರಸಿದ್ಧಿಯಾಗಿರುವ ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಬೋರೇಗೌಡರ ಜಮೀನಿಗೆ ತೆರಳಿದರು. ಈ ವೇಳೆ ಫಸ್ಟ್ ಅರ್ಥ್ ಪೌಂಡೇಷನ್ ಕಿರಣ್ ಪ್ರಕಾಶ್ ಹಾಗೂ ಎಂ.ಪಿ.ಗಂಗಾಧರ್ ನೈಸರ್ಗಿಕ ಬೇಸಾಯ ಪದ್ಧ್ದತಿಯ ಬಗ್ಗೆ ಶ್ರೀಲಂಕಾ ರೈತರಿಗೆ ಮಾಹಿತಿ ನೀಡಿದರು.
ರೈತ ದೇವೇಗೌಡ ಮಾತನಾಡಿ, ಸಾವಯವ ಕೃಷಿ, ಸಾವಯವ ಆಹಾರಕ್ಕೆ ಸಾವಿಲ.್ಲ ನಾವು ಹಣದಾಸೆಗಾಗಿ ರಾಸಾಯನಿಕ ಕೃಷಿ ಮೂಲಕ ಉತ್ಪಾದನೆ ಮಾಡುತ್ತಿರುವ ಆಹಾರ ವಿಷಯುಕ್ತವಾಗಿದೆ. ಬೆಳೆಯುವ ಆಹಾರ ದೇಹಕ್ಕೆ ಔಷಧ ಆಗಬೇಕೇ ಹೊರತು ವಿಷ ವಾಗಬಾರದು. ರಾಸಾಯಿನಿಕ ಗೊಬ್ಬರ, ಕ್ರಿಮಿನಾಶಕಗಳ ವಿಪರೀತ ಬಳಕೆಯಿಂದ ಭೂಮಿಗೆ ನಾವು ವಿಷವುಣಿಸುತ್ತಿದ್ದೇವೆ. ಹಾಗಾಗಿ, ಬಿಳಿ ಆಹಾರ ಪದಾರ್ಥ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಭೂಮಿಗೆ ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಭೂಮಿರಕ್ಷಣೆ ಮಾಡಿದರೆ ಭೂಮಿ ನಮ್ಮನ್ನು ರಕ್ಷಿಸುತ್ತದೆ. ಸಾಧ್ಯವಾದಷ್ಟು ಎಲ್ಲ ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಫಸ್ಟ್‌ಅರ್ಥ್ ಪೌಂಡೇಷನ್‌ನ ಕಿರಣ್‌ಪ್ರಕಾಶ್ ಹಾಗೂ ಎಂ.ಪಿ.ಗಂಗಾಧರ್ ಇತರರು ಇದ್ದರು.