ಜಿಲ್ಲೆ

ಮದ್ಯವರ್ಜನೆಯಿಂದ ಗಾಂಧಿ ಚಿಂತನೆ ಅನುಷ್ಠಾನ

reportermys

ಚಾಮರಾಜನಗರ: ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಬೇಕೆಂದರೆ ಕುಡುಕರು ಮದ್ಯಪಾನ ವರ್ಜಿಸಬೇಕು. ಈ ಮೂಲಕ ಗಾಂಧಿ ಚಿಂತನೆಯನ್ನು ಅನುಷ್ಠಾನಗೊಳಿಸಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.


ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ.ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಸ್ಮತಿ ಹಾಗೂ ಜನಜಾಗೃತಿ ಜಾಥಾ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಮನಸ್ಸು ಮಾಡಿದರೆ ಮದ್ಯಪಾನ ವರ್ಜಿಸಬಹುದು. ಪ್ರಸ್ತುತ ದಿನಗಳಲ್ಲಿ ಸಾವಿನ ಪ್ರಮಾಣದಲ್ಲಿ ಬಹುತೇಕರು ಕುಡಿತದಿಂದ ಅನಾರೋಗ್ಯಕ್ಕೊಳಗಾದವರೇ ಹೆಚ್ಚು. ತಂದೆ ಕುಡಿದರೆ ಅದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಯಾವುದೋ ನೆಪ ಹೇಳಿಕೊಂಡು ಕುಡಿಯುವುದನ್ನು ಬಿಟ್ಟು ಮನಸ್ಸು ಪರಿವರ್ತನೆ ಮಾಡಿಕೊಂಡು ಮದ್ಯ ವರ್ಜಿಸಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಸಾನಿಧ್ಯವನ್ನು ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀಚನ್ನಬಸವಸ್ವಾಮೀಜಿ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮು ನೆಲ್ಲಿತ್ತಾಯ , ಜಿಲ್ಲಾ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಸ್.ರವಿಶಂಕರ್, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಕೆರೆ ನೀರು ಹೋರಾಟ ಸಮಿತಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಬಿ.ಕೆ.ರವಿಕುಮಾರ್, ಡಾ.ಬಸವರಾಜೇಂದ್ರ, ಜಿಲ್ಲಾ ಜನಜಾಗೃತಿ ವೇದಿಕೆಯ ನಿರ್ಗಮಿತ ಅಧ್ಯಕ್ಷ ರಾಜಶೇಖರ ಆರಾಧ್ಯ, ಹರೀಶ್‌ಕುಮಾರ್ ಮತ್ತು ಇತರರು ಇದ್ದರು.