ತೀರ್ಥಹಳ್ಳಿ: ತಾಲೂಕಿನ ಮುಳುಬಾಗಿಲು ದ್ವಾರಕಾ ಸಂಸ್ಥಾನ ಕೃಷ್ಣಾನಂದ ಮಠದ ಶ್ರೀಗಳಾದ ಕೃಷ್ಣಾನಂದ ತೀರ್ಥರು (61) ಶನಿವಾರ ರಾತ್ರಿ ದೇಹತ್ಯಾಗ ಮಾಡಿದರು. ಭಾನುವಾರ ಮಧ್ಯಾಹ್ನ 4 ಗಂಟೆಗೆ ಮಠದ ಆವರಣದಲ್ಲಿ ಹರಿಹರದ ಪ್ರೊ. ವಿದ್ಯಾನಾಥ ಶಾಸ್ತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳ ನಂತರ ಶ್ರೀಗಳ ಸಮಾಧಿ ಕಾರ್ಯ ನಡೆಯಿತು.
ಕಳೆದ 41 ವರ್ಷಗಳಿಂದ ಮಠಾಧೀಶರಾಗಿದ್ದ ಶ್ರೀಗಳೊಂದಿಗೆ ಮಠದಲ್ಲಿ ಮೂವರು ಶಿಷ್ಯರಿದ್ದರು. ರಾಜ್ಯದ ಕೋಲಾರ, ಬಸವಾಪಟ್ಟಣ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲದೆ ಉತ್ತರದ ಕಾಶಿಯವರೆಗೂ ಸಂಪರ್ಕ ಹೊಂದಿದ್ದರು. ಅವರ ಪೂರ್ವಾಶ್ರಮ ಪಟ್ಟಣ ಸಮೀಪದ ಘಂಟೆಹಕ್ಕಲು ಗ್ರಾಮವಾಗಿದ್ದು ತಂದೆ ಸೀತಾರಾಮ ಭಟ್. ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಅ.2ರಂದು ಮಠದಲ್ಲಿ ನಾರಾಯಣ ಬಲಿ ಹಾಗೂ 3ರಂದು ಪ್ರಥಮ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಪ್ರೊ. ವಿದ್ಯಾನಾಥ ಶಾಸ್ತ್ರಿಗಳು ತಿಳಿಸಿದ್ದಾರೆ.
ಮಠದಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳಿವೆ. ಶ್ರೀಗಳಿಗೆ ಪರ್ಯಾಯವಾಗಿ ವಾರಸುದಾರರಿಲ್ಲದ ಕಾರಣ ವಸ್ತುಗಳ ಸುರಕ್ಷತೆ ದೃಷ್ಟಿಯಿಂದ ತಾಲೂಕು ಮುಜರಾಯಿ ಅಧಿಕಾರಿಗಳು ಆಭರಣ, ವಸ್ತುಗಳಿರುವ ಕೊಠಡಿಗೆ ಬೀಗ ಹಾಕಿರುವುದಲ್ಲದೆ ಪೊಲೀಸ್ ಕಾವಲು ಹಾಕಿದ್ದಾರೆ.