ಮಂಡ್ಯ: ಶ್ರೀ ಕೃಷ್ಣ ಜಗತ್ತಿಗೆ ನೀಡಿರುವ ವಿಚಾರಗಳು ನಮ್ಮ ಜೀವನದಲ್ಲಿ ನೆಮ್ಮದಿ ಕೊಡುವ ಮಾರ್ಗದ ಕಡೆ ಕೊಂಡೊಯ್ಯುತ್ತದೆ ಎಂದು ಮೇಲುಕೋಟೆ ಇಸ್ಕಾನ್ ಮುಖ್ಯಸ್ಥ ಆನಂದ ಗೌರಂಗದಾಸ ಹೇಳಿದರು.
ನಗರದ ಶಾರದಾ ಚಂದ್ರಮೌಳೇಶ್ವರ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ ಎಲ್ಲರ ಅಚ್ಚು ಮೆಚ್ಚಿನ ಭಗವಂತ. ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಭಗವಂತ ಕೃಷ್ಣನನ್ನು ಆರಾಧಿಸಲು ಕಾರಣ ಇಸ್ಕಾನ್ ಸಂಸ್ಥೆಯ ಆಚಾರ್ಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಎಂದು ಹೇಳಿದರು.
ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಭಾರತದಲ್ಲಿ ಜನಿಸಿ ಅವರ ಗುರುಗಳಿಂದ ಭಗವದ್ಗೀತೆಯ ಜ್ಞಾನವನ್ನು ಪ್ರಪಂಚದಾದ್ಯಂತ ತಿಳಿಸಬೇಕು ಎಂದು ಹೇಳಿದ್ದರು. ಪ್ರಭುಪಾದರು ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣನ ಮಾತು ಯಾರು ಕೇಳುತ್ತಾರೆ ಎಂಬ ಭಾವನೆ ಅವರಲ್ಲಿ ಇರುತ್ತದೆ. ಆದರೆ ಕೃಷ್ಣನ ಕೃಪೆಯಿಂದ ಎಲ್ಲರೂ ಸಹ ಭಗವಂತನ ನಾಮ, ಕೀರ್ತನೆ, ಅವನ ರಚನೆಗಳ ಕುರಿತು ತಿಳಿದುಕೊಳ್ಳಲು ಉತ್ಸಾಹಕರಾಗಿದ್ದರೆಂದು ನಂತರ ಅವರಿಗೆ ತಿಳಿಯುತ್ತದೆ ಎಂದರು.
ಪ್ರಭುಪಾದರು ಕೇವಲ ಹತ್ತು ವರ್ಷದಲ್ಲಿ 108 ದೇವಾಲಯ ನಿರ್ಮಾಣ ಮಾಡುತ್ತಾರೆ, 60ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ ಹಾಗೂ 10 ಸಾವಿರಕ್ಕೂ ಹೆಚ್ಚು ಶಿಷ್ಯ ವೃಂದ ಗಳಿಸಿದ್ದರು. ಇವೆಲ್ಲವನ್ನು ಅವರು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತನ್ನು ಆಧಾರಿಸಿ ಮಾಡಿದ್ದರು. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ಸಹ ನಮಗೆ ಸಹಾಯ ಮಾಡುವ ಜ್ಞಾನ. ಏನೇ ಮಾಡಿದರೂ ನನಗಾಗಿ ಮಾಡೆಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿಕೊಂಡಿದ್ದಾರೆ. ಆದ್ದರಿಂದ ನೀವೆಲ್ಲರೂ ಒಳ್ಳೆಯ ಮನಸಿನಿಂದ ಸತ್ ಕಾರ್ಯ ನಿರ್ವಹಿಸಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕರ್ನಾಟಕ ಜನಪರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎಂ.ಜವರೇಗೌಡ, ಮುಖಂಡರಾದ ಮಾದೇಗೌಡ, ಪ್ರಕಾಶ್, ಮಹೇಶ್ ಇತರರಿದ್ದರು. ಇದೇ ವೇಳೆ ಮಕ್ಕಳು ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು. ಅಂತೆಯೇ ಕೃಷ್ಣ ಹಾಗೂ ಗೋಪಿಕೆಯರ ಉಡುಗೆ ತೊಟ್ಟು ನೃತ್ಯ ಪ್ರದರ್ಶನ ಮಾಡಿದರು.