ಬೆಂಗಳೂರು: ನಗರದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಶ್ರದ್ಧಾ, ಭಕ್ತಿಯೊಂದಿಗೆ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಇಸ್ಕಾನ್, ಗೋವರ್ಧನ ಗಿರಿ ಸೇರಿ ವಿಷ್ಣುವಿನ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಲಂಕಾರಗಳು ನಡೆಯಿತು. ಕೆಲವರು ತಮ್ಮ ಮನೆಗಳಲ್ಲಿ ಕೃಷ್ಣನ ಹೆಜ್ಜೆ ಗುರುತುಗಳನ್ನು ಬರೆದು, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು.
ಮುಂಜಾನೆಯೇ ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ಮನೆಯನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಬಾಗಿಲನ್ನು ಅಲಂಕರಿಸಿ, ವಿಧವಿಧವಾದ ಖಾದ್ಯಗಳನ್ನು ಮಾಡಿ ಬೆಣ್ಣೆ ಸಹಿತ ಕೃಷ್ಣನಿಗೆ ನೈವೇದ್ಯ ಅರ್ಪಿಸಿದರು. ಮನೆಯಲ್ಲಿನ ಪುಟ್ಟ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಹಾಗೂ ಹೆಣ್ಣುಮಕ್ಕಳಿಗೆ ರಾಧೆಯ ಅಲಂಕಾರ ಮಾಡಿ ಅರತಿ ಬೆಳಗಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಬಾರಿ ಎರಡು ದಿನ ಶ್ರೀ ಕೃಷ್ಣ ಜನ್ಮಾಷ್ಠಮಿ ಬಂದಿದೆ. ಹೀಗಾಗಿ ಹಲವು ಶಾಲೆಗಳಿಗೆ ಬುಧವಾರ ರಜೆ ನೀಡಲಾಗಿತ್ತು. ಇನ್ನೂ ಕೆಲ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿ, 10 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ-ರಾಧೆಯರ ಉಡುಪು ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು.
ಇಸ್ಕಾನ್‌ನಲ್ಲಿ ಎರಡು ದಿನ ಶ್ರೀಕೃಷ್ಣ ವೈಭವ: ಶ್ರಾವಣ ಮಾಸದ ಅಷ್ಟಮಿ ಶ್ರೀ ಕೃಷ್ಣನ ಜನ್ಮದಿನವನ್ನು ಬೆಂಗಳೂರಿನ ಇಸ್ಕಾನ್ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ ಮತ್ತು ವೈಟ್‌ಫೀಲ್ಡ್‌ನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬುಧವಾರ ದೇವರಿಗೆ ಅಭಿಷೇಕ, ಆರತಿ, ಉಯ್ಯಲೆ ಸೇವೆ ಇತ್ಯಾದಿ ಸೇವೆಗಳನ್ನು ಮಾಡಲಾಯಿತು. ಬೆಳಗ್ಗೆ 7.30ರಿಂದಲೇ ಭಕ್ತರು ಸಾಲುಗಟ್ಟಿ ಆಗಮಿಸಿದ್ದರು. 8.45ಕ್ಕೆ ಶ್ರೀ ರಾಧಾಕೃಷ್ಣರ ಜುಲಾನ ಸೇವೆ ಆರಂಭವಾಯಿತು. 11.30ಕ್ಕೆ ಮೊದಲ ಅಭಿಷೇಕ ನಡೆಯಿತು. ಸಂಜೆ 5.30ಕ್ಕೆ ಎರಡನೇ ಅಭಿಷೇಕ, ರಾತ್ರಿ 8.30ಕ್ಕೆ ಮೂರನೇ ಅಭಿಷೇಕ ನಡೆಯಲಿದೆ. ರಾತ್ರಿ 10.15ಕ್ಕೆ ವಿಶೇಷ ಆರತಿ ಮಾಡಲಾಯಿತು. 10.40ಕ್ಕೆ ವಿಶೇಷ ಸೇವೆಯೊಂದಿಗೆ ಪೂರ್ಣಗೊಂಡಿತು.
ಗುರುವಾರ ಬೆಳಗ್ಗೆ 7.30ಕ್ಕೆ ಮೊದಲ ಅಭಿಷೇಕ, 8.45ಕ್ಕೆ ಶ್ರೀ ರಾಧಾ-ಕೃಷ್ಣರ ಉಯ್ಯಲೆ ಉತ್ಸವ. 11.30ಕ್ಕೆ ಎರಡನೇ ಅಭಿಷೇಕ. ಮಧ್ಯಾಹ್ನ 12ಕ್ಕೆ ರಾಧಾ ಕೃಷ್ಣರಿಗೆ 108 ಸಿಹಿ ತಿಂಡಿಗಳ ಭಕ್ಷ್ಯಗಳ ನೈವೇದ್ಯ ಅರ್ಪಿಸಲಿದ್ದು, ಸಂಜೆ 5 ಗಂಟೆಗೆ ಮೂರನೇ ಅಭಿಷೇಕ. ರಾತ್ರಿ 9 ಗಂಟೆಗೆ ನಾಲ್ಕನೇ ಮಧ್ಯರಾತ್ರಿಯ ಅಭಿಷೇಕ. ಮಧ್ಯರಾತ್ರಿ 12ಕ್ಕೆ ವಿಶೇಷ ಆರತಿ ನಡೆಯಲಿದೆ. 12.45ಕ್ಕೆ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಪೂಜೆಗಳು ಪೂರ್ಣಗೊಳ್ಳಲಿವೆ.