ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯನ್ನು, ಕೃಷ್ಣಾಷ್ಟಮಿ, ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣನ ಜನ್ಮದಿನವನ್ನು ಸಂಭ್ರಮಿಸುವ ದಿನವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಸಜ್ಜಾಗುತ್ತಿದ್ದು, ಹಬ್ಬಕ್ಕೂ ಮುನ್ನವೇ ಆಚರಣೆ ಕಳೆಗಟ್ಟಿದ್ದು, ಶ್ರೀ ಕೃಷ್ಣ ಮಠ, ಇಸ್ಕಾನ್ ಸೇರಿ ವಿಷ್ಣು ದೇವಾಲಯಗಳಲ್ಲಿ ಸಿದ್ಧತೆ ಭರದಿಂದ ಸಾಗಿವೆ.
ಕೃಷ್ಣ ಜನ್ಮಾಷ್ಟಮಿಗೆ ಸೋಮವಾರ ಧಾರ್ಮಿಕ ಪಠ್ಯಗಳ ಓದುವಿಕೆ ಮತ್ತು ಮಂತ್ರಗಳ ಪಠಣ, ಭಾಗವತ ಪುರಾಣದ ಪ್ರಕಾರ ಕೃಷ್ಣನ ಜೀವನದ ನೃತ್ಯ ಮತ್ತು ಆಚರಣೆಗಳು, ಮಧ್ಯರಾತ್ರಿಯವರೆಗೆ ಭಕ್ತಿಗೀತೆ ಮತ್ತು ಉಪವಾಸ ಸೇರಿವೆ. ಮಂಗಳವಾರ ವಿಟ್ಲಪಿಂಡಿ ಅಥವಾ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಇನ್ನ ಅಷ್ಟಮಿ ಪ್ರಯುಕ್ತ ಭಕ್ತರಿಗೆ ವಿತರಿಸಲು ಕೆಲವೆಡೆ ಪ್ರಸಾದದ ಸಿದ್ಧತೆಯೂ ನಡೆಸಿದೆ.
ಇಸ್ಕಾನ್ ನಲ್ಲಿ ವಿಶೇಷ ಆಚರಣೆ: ಪ್ರತಿ ವರ್ಷದಂತೆ ಈ ಬಾರಿಯೂ ಇಸ್ಕಾನ್ ಬೆಂಗಳೂರು ರಾಜಾಜಿನಗರದ ಹರೇ ಕೃಷ್ಣ ಬೆಟ್ಟ ಮತ್ತು ಕನಕಪುರ ರಸ್ತೆಯ ವೈಕುಂಠ ಬೆಟ್ಟ ಮತ್ತು ವೈಟ್‌ಫೀಲ್ಡ್‌ನ ಕೆಟಿಪಿಒ ಈ ಮೂರು ಸ್ಥಳಗಳಲ್ಲಿ ಭಾನುವಾರ ಮತ್ತು ಸೋಮವಾರ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತ ಆಚರಣೆಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಇಸ್ಕಾನ್ ಸಜ್ಜಾಗಿದೆ.
ಎರಡು ದಿನಗಳ ಉತ್ಸವದಲ್ಲಿ ಶ್ರೀಕೃಷ್ಣನ ದಿವ್ಯ ಅವತಾರ ಅನಾವರಣಗೊಳ್ಳಲಿದ್ದು, ಶ್ರೀ ಕೃಷ್ಣನಿಗೆ ಅಭಿಷೇಕ, ವಿಶೇಷ ಅಲಂಕಾರ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ, ಉಯ್ಯಲೆ ಸೇವೆ ನಡೆಯಲಿದ್ದು, 108 ಬಗೆಯ ವಿಶೇಷ ನೈವೇದ್ಯವನ್ನು ಮಾಡಿ ಅರ್ಪಿಸಲಾಗುವುದು ಎಂದು ದೇವಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಆನಂದ ಮಹೋತ್ಸವ: ಇಸ್ಕಾನ್ ಬೆಂಗಳೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೆಟಿಪಿಒ ವೈಟ್‌ಫೀಲ್ಡ್‌ನಲ್ಲಿ ‘ಆನಂದ ಮಹೋತ್ಸವ - 2024’ ಆಯೋಜಿಸುತ್ತಿದೆ. ಇದರಲ್ಲಿ ಅಂತರಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ನೃತ್ಯ, ಸಂಗೀತ ಮತ್ತು ಶ್ಲೋಕ ಪಠಣದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾಯಕರಾದ ಸೂರ್ಯಗಾಯತ್ರಿ, ಮಾನ್ಯ ಅರೋರಾ ಮತ್ತು ಸಾಧೋ ಬ್ಯಾಂಡ್‌ನಿಂದ ಭಜನಾ ಸಂಧ್ಯಾ ಏರ್ಪಡಿಸಲಾಗಿದೆ. ಭಕ್ತರಿಗೆ ವಿಶೇಷವಾಗಿ ಕೃಷ್ಣ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ವೇಷ ಭೂಷಣ ಸ್ಪರ್ಧೆ: ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಶಾಲೆಗಳಿಗೆ ರಜೆ ನೀಡುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಶನಿವಾರವೇ ಚಿಕ್ಕ ಮಕ್ಕಳಿಗೆ ಕೃಷ್ಣ-ರಾಧೆಯರ ವೇಷ ಭೂಣಷ ಸ್ಪರ್ಧೆ ಏರ್ಪಡಿ, ಬಹುಮಾನ ಸಹ ವಿತರಿಸಲಾಯಿತು. ಇನ್ನೂ ಕೆಲ ಶಾಲೆಗಳಲ್ಲಿ ಸೋಮವಾರ ಆಯೋಜಿಸಲಾಗಿದೆ.