ಜಿಲ್ಲೆ

ವಿಜೃಂಭಣೆಯಿಂದ ಜರುಗಿದ ಶ್ರೀ ಕೋಟೆ ಮಾರಮ್ಮ ರಥೋತ್ಸವ

ನುಗ್ಗೇಹಳ್ಳಿ: ಹೋಬಳಿಯ ಜಂಬೂರು ಗ್ರಾಮದ ಪುರಾಣಪ್ರಸಿದ್ಧ ಶ್ರೀ ಕೋಟೆ ಮಾರಮ್ಮ ರಥೋತ್ಸವ ಮಂಗಳವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ಸಂಪ್ರದಾಯದಂತೆ ವಿವಿಧ ಪೂಜೆಗಳು ನಡೆದವು.

ಗ್ರಾಮದ ರಾಜಬೀದಿಗಳಲ್ಲಿ ಮಹಿಳೆಯರು ತಂಬಿಟ್ಟಿನ ಆರತಿ ನೆರವೇರಿಸಿದರು. ನಂತರ ರಥದ ಸುತ್ತ ಪ್ರದಕ್ಷಿಣೆ ನಡೆಸಿ ದೇವರನ್ನು ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ರಥಕ್ಕೆ ಪೂಜೆ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವಕ್ಕೆ ನುಗ್ಗೇಹಳ್ಳಿ, ಮುದ್ದನಹಳ್ಳಿ, ಹೊನ್ನ ಮಾರನಹಳ್ಳಿ, ಕಾರೇಕೆರೆ, ಹುಲಿಕೆರೆ, ತೆಂಕನಹಳ್ಳಿ, ಮಾದಿಹಳ್ಳಿ, ಮಂಚೇನಹಳ್ಳಿ ಅತ್ತಿಹಳ್ಳಿ, ತಾವರೆಕೆರೆ, ಅಯಾರಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.

ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಹಿನ್ನೆಲೆ ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಜಂಬೂರು ಗ್ರಾಮ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿತ್ತು, ಡೊಳ್ಳು ಕುಣಿತ ಶ್ರೀ ಕೋಟೆ ಮಾರಮ್ಮ ಮಹಿಳಾ ಕೋಲಾಟದ ತಂಡದ ವತಿಯಿಂದ ವಿಶೇಷ ಕೋಲಾಟ ನೆರೆದಿದ್ದ ಭಕ್ತರ ಗಮನ ಸೆಳೆಯಿತು.

ಜಾತ್ರಾ ಮಹೋತ್ಸವದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎ.ರಂಗಸ್ವಾಮಿ, ಗುಡಿಗೌಡ್ರು, ಎಂ.ಎ.ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಯುವ ಕಾಂಗ್ರೆಸ್ ಮುಖಂಡ ಶಶಾಂಕ್, ಗೋಪಾಲಸ್ವಾಮಿ ಇತರರು ಪಾಲ್ಗೊಂಡಿದ್ದರು.