ಪಿರಿಯಾಪಟ್ಟಣದ ಶಕ್ತಿ ದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. 
ಜಿಲ್ಲೆ

ಶ್ರೀ ಕನ್ನಂಬಾಡಿ ಅಮ್ಮನ ಬ್ರಹ್ಮರಥೋತ್ಸವ ಅದ್ದೂರಿ

ಪಿರಿಯಾಪಟ್ಟಣ: ಪಟ್ಟಣದ ಶಕ್ತಿದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ಶ್ರೀ ಕನ್ನಂಬಾಡಿಯಮ್ಮ ಉದ್ಭವ ಮೂರ್ತಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ಜಾತ್ರಾ ಮಹೋತ್ಸವಕ್ಕೆ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ಸಾಗಿದವು. ಶ್ರೀ ಕನ್ನಂಬಾಡಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು. ನಂತರ ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡಿದ್ದ ರಥದ ಬಳಿ ಉತ್ಸವ ಮೂರ್ತಿಯನ್ನು ತಂದು ರಥದ ಪ್ರದಕ್ಷಿಣೆ ನಡೆಸಿ 11.45 ರ ಶುಭ ಲಗ್ನದಲ್ಲಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ದೇವತೆಗೆ ಹಣ್ಣು - ಜವನ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥದಲ್ಲಿ ವಿರಾಜಮಾನರಾಗಿದ್ದ ಶಕ್ತಿ ದೇವತೆಗೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ದೇವಾಲಯದ ಮುಂಭಾಗದಿಂದ ಹೊರಟ ರಥೋತ್ಸವದ ಮೆರವಣಿಗೆ ಬಿ.ಎಂ.ರಸ್ತೆಯಲ್ಲಿ ಸಾಗಿ ಆದಿಚುಂಚನಗಿರಿ ಸಮುದಾಯ ಭವನದ ರಸ್ತೆವರೆಗೆ ಎಳೆದುತಂದು ರಥವನ್ನು ನಿಲ್ಲಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಬಿಸಿಲಿನ ಬೇಗೆಯಿಂದ ತಣಿಸಲು ಪಟ್ಟಣದ ಹಲವೆಡೆ ವಿವಿಧ ಭಕ್ತ ಮಂಡಳಿಗಳ ವತಿಯಿಂದ ಕಲ್ಲಂಗಡಿ ಹಣ್ಣು, ಮಜ್ಜಿಗೆ, ಪಾನಕ ಮತ್ತಿತರ ತಂಪು ಪಾನೀಯಗಳನ್ನು ವಿತರಿಸಲಾಯಿತು. ಅಲ್ಲದೆ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರ ಹಸಿವು ನೀಗಿಸಲು ಪ್ರಸಾದದ ರೂಪದಲ್ಲಿ ರೈಸ್‌ಬಾತ್, ಮೊಸರನ್ನ, ಕೇಸರಿ ಬಾತ್, ಕೋಸಂಬರಿ, ಹಣ್ಣಿನ ರಸಾಯನ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಕೆ.ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಪುರಸಭೆ ಸದಸ್ಯರಾದ ಮಂಜುನಾಥ್ ಸಿಂಗ್, ರವಿ, ಪಿ.ಸಿ.ಕೃಷ್ಣ, ಎಚ್.ಕೆ.ಮಂಜುನಾಥ್, ಪ್ರಕಾಶ್ ಇತರರು ಪಾಲ್ಗೊಂಡಿದ್ದರು.