ಕಡೂರು ತಾಲೂಕು ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಿ ರಥೋತ್ಸವವು ನಡೆಯಿತು.  
ಜಿಲ್ಲೆ

ಕೆರೆಸಂತೆಯಲ್ಲಿ ಶ್ರೀ ಜನಾರ್ದನಸ್ವಾಮಿ ರಥೋತ್ಸವ

ಕಡೂರು: ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶ್ರೀ ಜನಾರ್ದನ, ಶ್ರೀ ಮಹಾಲಕ್ಷ್ಮೀ ದೇವಸ್ಥಾನಗಳನ್ನು ರಾಜ್ಯ ಪುರಾತತ್ವ ಇಲಾಖೆ ಮಾರ್ಗದರ್ಶನದಲ್ಲಿ ನವೀಕರಿಸಲಾಗಿದ್ದು, ಗುರುವಾರ ಶ್ರೀ ಜನಾರ್ದನ, ಮಹಾಲಕ್ಷ್ಮೀ ವಿಗ್ರಹಗಳ ಮರು ಪ್ರತಿಪಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಶುಕ್ರವಾರ ದೇವಿಗೆ ಮೀಸಲು, ಬಾಗಿನ ಸಮರ್ಪಣೆ ಮುಂತಾದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಹಾಲಕ್ಷ್ಮೀ ದೇವಿಯ ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತು. ಬಳಿಕ ಅಲಂಕೃತ ನೂತನ ರಥ ಬಳಿ ದೇವಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಶಾಸಕ ಕೆ.ಎಸ್.ಆನಂದ್ ತಾಲೂಕಿನ ಜನರ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿದರು. ರಥಕ್ಕೆ ಬಲಿ ಪೂಜೆ ನಡೆಸಿದ ನಂತರ ಭಕ್ತರು ರಥ ಎಳೆದು ಸಂಭ್ರಮಿಸಿದರು. ಭಕ್ತರು ರಥಕ್ಕೆ ಬಾಳೆಹಣ್ಣು, ಎಳನೀರು, ಕಾಯಿ ಸಮರ್ಪಿಸಿದರು. ಗೊರವಯ್ಯಗಳ ಜಾನಪದ ಶೈಲಿಯ ಪೂಜೆ ಎಲ್ಲರ ಗಮನ ಸೆಳೆಯಿತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಹೊರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ಕಡೂರು ಪಿಎಸ್‌ಐ ಪವನ್‌ಕುಮಾರ್ ಮತ್ತು ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್, ಪುರಸಭೆ ಸದಸ್ಯ ತೋಟದಮನೆ ಕೆ.ಎಂ.ಮೋಹನ್‌ಕುಮಾರ್, ಸಮಿತಿ ಸದಸ್ಯ ಕೆರೆಸಂತೆ ಸೋಮಶೇಖರ್, ತಮಟೇಗೌಡ, ಕೆರೆಸಂತೆ ಗ್ರಾಪಂ ಅಧ್ಯಕ್ಷ ರವಿನಾಯ್ಕ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ್, ಸತೀಶ್‌ನಾಯ್ಕ, ರುದ್ರೇಗೌಡ, ಠೇಂಕರ್ ಸ್ವಾಮಿ, ಅಬಿದ್‌ಪಾಷಾ, ದಿನೇಶ್, ಕರಿಬಡ್ಡೆ ರಾಜು, ಧನರಾಜ್, ಎಂ.ಎನ್.ಭಾರತಿ, ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.