ಹುಬ್ಬಳ್ಳಿ: ದಾಸಚತುಷ್ಟಯರಲ್ಲಿ ಒಬ್ಬರಾದ ಜಗನ್ನಾಥದಾಸರ ಮೇರುಕೃತಿ ಶ್ರೀ ಹರಿಕಥಾಮೃತಸಾರ ಕೃತಿಯು ತಾತ್ವಿಕ ಅರ್ಥಗಳನ್ನು ಹೊಂದಿದೆ. ಇದರಲ್ಲಿ ಶುಷ್ಕ ಪದಗಳಿಲ್ಲ. ಇಂತಹ ಸಂಪದ್ಭರಿತ ಕೃತಿ ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ ಸಿಗಬೇಕು ಎಂದು ಪಂ. ಗೋಪಿನಾಥಾಚಾರ್ಯ ಗಲಗಲಿ ಅಭಿಪ್ರಾಯಪಟ್ಟರು.
ಇಲ್ಲಿಯ ಭವಾನಿನಗರ ರಾಯರಮಠದಲ್ಲಿ ಸಂಯುತಾ ಪ್ರತಿಷ್ಠಾನ, ಟಿಟಿಡಿ ಹಾಗೂ ಶ್ರೀಗುರುಸಾರ್ವಭೌಮ ದಾಸಸಾಹಿತ್ಯ ಪ್ರೊಜೆಕ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಂ. ಧೂಳಖೇಡ ನಾರಾಯಣಾಚಾರ್ಯರ ಸಂಶೋಧನಾ ಕೃತಿ ಶ್ರೀ ಹರಿಕಥಾಮೃತ ಸಾರ ಹಾಗೂ ಭಾಗವತ ಧರ್ಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ತಾತ್ವಿಕತೆ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ರಾಮಾಯಣ, ಮಹಾಭಾರತ ಗೊತ್ತಿಲ್ಲದವರೇ ಇಲ್ಲ. ದೇಸಿ ಸಂಸ್ಕೃತಿಯನ್ನು ಸಾಮಾನ್ಯ ಜನರು ಜೀವಂತವಾಗಿರಿಸಿದ್ದು, ಹಿಂದುತ್ವ ಜೀವನದ ಭಾಗ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಕ್ಲಿಷ್ಟಕರ ಅಂಶಗಳ ಸರಳ ನಿರೂಪಣೆಯಿಂದಾಗಿ ಕೃತಿಯು ಓದುಗರಲ್ಲಿ ಆಸಕ್ತಿ ಉಂಟುಮಾಡುತ್ತದೆ ಎಂದು ತಿಳಿಸಿದರು.
ಅನಂತಾಚಾರ್ಯ ಜೋಶಿ ಕೃತಿ ಅವಲೋಕನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ವೈದ್ಯ ಡಾ. ವಿ.ಜಿ. ನಾಡಗೌಡ, ಉತ್ತಮ ಸಂಸ್ಕಾರ ಮತ್ತು ಆಧ್ಯಾತ್ಮಿಕ ಸಾಹಿತ್ಯ ಕೃತಿಗಳನ್ನು ಓದಿ ಅರಗಿಸಿಕೊಳ್ಳುವದರಿಂದ ದೇಹ ಮತ್ತು ಮನಸ್ಸುಗಳು ಉಲ್ಲಸಿತವಾಗಿ, ಅನೇಕ ಮಾನಸಿಕ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದರು.
ಪಂ. ಧೂಳಖೇಡ ನಾರಾಯಣಾಚಾರ್ಯರು, ಕೃತಿ ರಚನೆ ಕುರಿತು ಮಾತನಾಡಿದರು. ಸಂಯುತಾ ಟ್ರಸ್ಟ್ ಗೌರವಾಧ್ಯಕ್ಷ ಎ.ಸಿ. ಗೋಪಾಲ ಕೃತಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಗಣಪತಿ ಗಂಗೊಳ್ಳಿ ಮಾತನಾಡಿದರು.
ಶ್ರೀಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲಾಚಾರ್ಯ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜನಮೇಜಯ ಉಮರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ, ಅಶ್ವಿನಿ ಬಾಡಗಿ, ವನಜಾ ಕಾತೋಟೆ ನೇತೃತ್ವದಲ್ಲಿ ಶ್ರೀ ಹರಿಕಥಾಮೃತ ಸಾರ ಕೃತಿ ಪಾರಾಯಣ ನಡೆಯಿತು.
ಪ್ರತಿಷ್ಠಾನದ ಸದಸ್ಯ ಬಿಂದುಮಾಧವ ಪುರೋಹಿತ, ಮನೋಹರ ಪರ್ವತಿ, ವಿಷ್ಣುತಿರ್ಥ ಕಲ್ಲೂರಕರ, ವಿಠಲ ಕುಲಕರ್ಣಿ, ಗುರುರಾಜ ಕೌಜಲಗಿ, ಶಂಕರ ಪಾಟೀಲ, ವಿಜಯ ನಾಡಜೋಶಿ, ಅರವಿಂದ ಕುರ್ತಕೋಟಿ, ಕೆ.ಎನ್. ಪುರೋಹಿತ ಪಾಲ್ಗೊಂಡಿದ್ದರು.