ಜಿಲ್ಲೆ

ಗುರು ಮಹಾಂತ ಸ್ವಾಮೀಜಿ ಸೇವಾ ಕಾರ್ಯ ಮಾದರಿ

ಚಿದಾನಂದ ಪಾಟೀಲ ನಂದೇಶ್ವರ

ಇಲ್ಲಿನ ಶ್ರೀ ಸಂಗನ ಬಸವಮಠ ಪ್ರಮುಖ ಬಸವ ಕೇಂದ್ರವಾಗಿದೆ. ಒಂದು ಗ್ರಾಮದ ಎಲ್ಲ ಸಮುದಾಯದವರನ್ನು ಒಂದೇ ಸೂರಿನಡಿ ಸೇರಿಸಿ ಅವರಲ್ಲಿ ಭಾವೈಕ್ಯ ಮೂಡಿಸುತ್ತಿರುವ ಶ್ರೇಯಸ್ಸು ಸವದಿ-ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿಗೆ ಸಲ್ಲುತ್ತದೆ.

ಸವದಿ ಮಠದ 6ನೇ ಹಾಗೂ ಇಲಕಲ್ ಮಠದ 20ನೇ ಪೀಠಾಧಿಪತಿಗಳಾದ ಗುರು ಮಹಾಂತ ಸ್ವಾಮೀಜಿ ಅವರು ಸರಳ ಹಾಗೂ ಮಾತೃ ಹೃದಯದ ಸ್ವಭಾವ ಹೊಂದಿದ್ದಾರೆ. ಲಿಂ. ಡಾ.ಮಹಾಂತ ಶಿವಯೋಗಿಗಳ ಸತ್ಕಾರ್ಯಗಳನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಇವರು ನಿತ್ಯ ಭಕ್ತರ ಮನೆಗೆ ತೆರಳಿ ದುಶ್ಚಟಗಳನ್ನು ತ್ಯಜಿಸುವಂತೆ ತಿಳಿ ಹೇಳಿ ಸಮಾಜದಲ್ಲಿ ಒಳ್ಳೆ ವಿಚಾರಗಳನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದ್ದಾರೆ. ರೈತರ ಜಮೀನಿಗೆ ತೆರಳಿ ನೀರನ್ನು ಹಿತಮಿತವಾಗಿ ಬಳಸಿ ಭೂತಾಯಿ ಆರೋಗ್ಯ ಕಾಪಾಡುವಂತೆ ಮನವಿ ಮಾಡುತ್ತಿದ್ದಾರೆ. ಲಿಂ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುವ ವಿನೂತನ ಕಾರ್ಯ ಕೈಗೊಳ್ಳುತ್ತ ಬರುತ್ತಿದ್ದಾರೆ.

ಸಮಾಜಮುಖಿ ಕಾರ್ಯ: ಅಂತಃಕರಣದ ಮಾತೃ ಹೃದಯಿ, ಸರಳ ಸಂಪನ್ನರಾದ ಪೂಜ್ಯ ಗುರುಮಹಾಂತ ಶ್ರೀಗಳು ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಶ್ರೀಗಳ ವಿದ್ಯೆ, ವಿನಯ, ವೈಜ್ಞಾನಿಕ ಮನೋಭಾವ, ಕ್ರಿಯಾಶೀಲತೆ, ದೂರದೃಷ್ಟಿ ಅನಂತವಾಗಿದ್ದು, ಅವರು ಕೈಗೊಳ್ಳುತ್ತಿರುವ ವಿನೂತನ ಕಾರ್ಯಕ್ರಮ ಸಮಾಜವನ್ನು ಸತ್ಪಥದಲ್ಲಿ ಸಾಗಿಸುತ್ತಿವೆ.

ವಿದೇಶದಲ್ಲಿ ಬಸವ ತತ್ತ್ವ ಪ್ರಸಾರ: ನಾಡಿನ ಅನೇಕ ಪೂಜ್ಯರ ಮಾರ್ಗದರ್ಶನದಲ್ಲಿ ಬೆಳೆದಿರುವ ಗುರು ಮಹಾಂತ ಶ್ರೀಗಳು ಆಸ್ಟ್ರೇಲಿಯಾ ಖಂಡದ ವಿವಿಧ ದೇಶಗಳಿಗೆ ತೆರಳಿ ಬಸವ ತತ್ತ್ವ ಪ್ರಸಾರಮಾಡುವ ಮೂಲಕ ಬಸವಣ್ಣನವರ ತತ್ತ್ವಗಳು ವಿಶ್ವಮಾನ್ಯವೆಂಬುದನ್ನು ಸಾಬೀತುಪಡಿಸಿದ್ದಾರೆ. ಮೂಢನಂಬಿಕೆ ಹೋಗಲಾಡಿಸಲು ನಾಗರ ಪಂಚಮಿಯಲ್ಲಿ ಮಕ್ಕಳಿಗಾಗಿ ಹಾಲು ಕುಡಿಯುವ ಕಾರ್ಯಕ್ರಮ ನಿರಂತರ ಆಯೋಜಿಸುತ್ತ ಬರುತ್ತಿದ್ದಾರೆ. ಸವದಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಫೆ.28ರಿಂದ ಮಾ.4ರ ವರೆಗೆ ಶರಣ ಸಂಸ್ಕೃತಿ ಮಹೋತ್ಸವ ಹಮ್ಮಿಕೊಂಡಿರುವ ಶ್ರೀಗಳ ಕಾರ್ಯ ಶ್ಲಾಘನೀಯ.