ಹುಬ್ಬಳ್ಳಿ: ಧಾರ್ಮಿಕ ಆಚರಣೆ ಹೆಸರಲ್ಲಿ ಮಹಾನಗರ ಪಾಲಿಕೆ ಹಾಗೂ ಹಲವು ಕೋಮುವಾದಿಗಳು ಸನಾತನವಲ್ಲದ ಸಾರ್ವಜನಿಕ ಗಣೇಶೋತ್ಸವವನ್ನು ನಗರದ ಚನ್ನಮ್ಮ ಮೈದಾನದಲ್ಲಿ ಆಚರಿಸಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸಮತಾ ಸೇನಾದ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೈದಾನದಲ್ಲಿ ಮುಸಲ್ಮಾನರಿಗೆ ವರ್ಷದಲ್ಲಿ ಎರಡು ಬಾರಿ ನಮಾಜ ಮಾಡಲು ಹಾಗೂ ಎರಡು ಬಾರಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಧ್ವಜಾರೋಹಣಕ್ಕೆ ಮಾತ್ರ ಅವಕಾಶವಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಆಚರಣೆ ಮಾಡಬಾರದು. ಒಂದು ವೇಳೆ ಮಾಡಿದರೆ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಹಿಂದಿನ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ಚನ್ನಮ್ಮ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಆಗಲೂ ಜನರು ಆತಂಕದಲ್ಲೇ ಓಡಾಡುವಂತಾಗಿತ್ತು. ಹಾಗಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ ಇಂತಹ ಆಚರಣೆಗೆ ಅನುಮತಿ ನೀಡಬಾರದು. ಈ ಹಿನ್ನೆಲೆಯಲ್ಲಿ ಸೆ. 15ರಂದು ಧಾರವಾಡದಲ್ಲಿ ಜಿಲ್ಲಾಧಿಕಾರಿಗೆ ದಲಿತ ಸಂಟನೆಗಳು ಮನವಿ ಸಲ್ಲಿಸಲಿವೆ. ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೋರಿದರು.
ಹಳೇಹುಬ್ಬಳ್ಳಿ ಸೇರಿ ಹಲವು ಕಡೆಗಳಲ್ಲಿ ಹಿಂದು ದೇವಸ್ಥಾನದ ಜಾಗ ಕಬಳಿಸಿ ಕಟ್ಟಡ ಕಟ್ಟಿದ್ದಾರೆ. ಅದರ ಬಗ್ಗೆ ಚಕಾರ ಎತ್ತದ ಹಿಂದು ಹೋರಾಟಗಾರರು ಕೇವಲ ಧಾಮಿರ್ಕ ಭಾವನೆ ಕೆರಳಿಸುವ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಉಳ್ಳಿಕಾಶಿ ದೂರಿದರು.
ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಮಾತನಾಡಿ, ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಿಯೇ ಇಲ್ಲ. ಆದರೂ, ಏಕಪಯವಾಗಿ ನಿರ್ಧಾರ ಮಾಡಲಾಗಿದೆ ಎಂದರು.