ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀದಿಡ್ಡಿಯಮ್ಮ ದೇವಿಯ ರಥೋತ್ಸವ ಹಾಗೂ ಹಬ್ಬವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಾಲ್ಕು ವರ್ಷಗಳ ಬಳಿಕ ಹಬ್ಬವನ್ನು ಆಚರಿಸುವ ಸಂಬಂಧ ಗ್ರಾಮದ ಒಟ್ಟು ಹದಿನೆಂಟು ಸಮುದಾಯದ ಜನರು ಒಟ್ಟು ಸೇರಿ, ಒಂದು ತಿಂಗಳಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಹಬ್ಬ ಆಚರಣೆಗೆ ಕನ್ನಂಬಾಡಿ ದೇವಿಯ ಅನುಗ್ರಹ ಪಡೆದುಕೊಂಡು, ಗ್ರಾಮದಲ್ಲಿ ಕೆಟ್ಟಶಕ್ತಿ, ಸೋಂಕು ಹೋಗಲಾಡಿಸಲು ಮಾರಿ ಹಬ್ಬ ಆಚರಿಸಿದರು.
ಶುಕ್ರವಾರ ಬೆಳಗ್ಗೆ ಶ್ರೀ ದಿಡ್ಡಿಯಮ್ಮ ದೇವಿಯ ವಿಗ್ರಹವನ್ನು ಗ್ರಾಮದಲ್ಲಿ ಹಾದುಹೋಗಿರುವ ಕಾವೇರಿ ನದಿಯ ಬಳಿ ಶುಚಿಗೊಳಿಸಿ ಗಂಗಾ ಪೂಜೆ ನೆರವೇರಿಸಲಾಯಿತು. ಬಳಿಕ ಪಲ್ಲಕ್ಕಿಯ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಿ, ಮೆರವಣಿಗೆಯ ಮೂಲಕ ಗ್ರಾಮದ ಮಧ್ಯಭಾಗದಲ್ಲಿ ರಥದ ಮನೆಯ ಬಳಿಗೆ ಕರೆ ತರಲಾಯಿತು. ತದನಂತರ ವಿವಿಧ ಪುಷ್ಪಗಳಿಂದ, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕಾರವಾಗಿದ್ದ, ರಥ(ಬಂಡಿ)ದ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಾತ್ರಿ 11.30ರ ನಂತರ ಚಾಲನೆಯಾದ ರಥೋತ್ಸವವು ಶನಿವಾರ ಮುಂಜಾನೆ ನಾಲ್ಕು ಗಂಟೆಯವರೆಗೂ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ದಿಡ್ಡಿಯಮ್ಮ ದೇವಸ್ಥಾನ ತಲುಪಿತು. ಭಕ್ತರು ರಥ ಎಳೆದು ದೇವಿಗೆ ಜೈಕಾರ ಹಾಕಿದರು.
ರಥೋತ್ಸವ ಸಂದರ್ಭದಲ್ಲಿ ದೇವಿಯ ಹೆಸರಿನಲ್ಲಿ ಹರಕೆ ಮಾಡಿಕೊಂಡ ಭಕ್ತರು ತಮ್ಮ ಹರಕೆ ತೀರಿಸಿದರು. ಅಲ್ಲದೇ ಹಬ್ಬಕ್ಕೆ ಆಗಮಿಸಿದಂತಹ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಗ್ರಾಮದ ಪ್ರಮುಖ ಬೀದಿಗಳು ರಸ್ತೆಗಳು ಕೇಸರಿ ಬಾವುಟ ಮತ್ತು ತೋರಣಗಳಿಂದ ಕಂಗೊಳಿಸುತ್ತಿತ್ತು. ವಿವಿಧ ಆಕಾರದಲ್ಲಿ ನಿರ್ಮಿಸಿದ ವಿದ್ಯುತ್ ಬಣ್ಣದ ದೀಪಗಳ ಅಲಂಕಾರವು ಎಲ್ಲರ ಗಮನ ಸೆಳೆಯಿತು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತುರ್ತು ಚಿಕಿತ್ಸೆ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದರು.
ಆರ್.ಸಿ.ಬಿ ತಂಡಕ್ಕೆ ಜೈಕಾರ: ಭಕ್ತರು ಹಾಗೂ ಯುವ ಸಮೂಹ ರಥ ಎಳೆಯುವ ಸಂದರ್ಭದಲ್ಲಿ ಜೈ ಆರ್‌ಸಿಬಿ, ಈ ಸಲ ಕಪ್ ನಮ್ದೇ ಎಂದು ಜೈಕಾರ ಹಾಕುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಅಭಿಮಾನ ವ್ಯಕ್ತಪಡಿಸಿದರು.