ಜಿಲ್ಲೆ

ಶ್ರೀ ದೇವಿರಮ್ಮ, ಶ್ರೀ ವೀರಭದ್ರೇಶ್ವರ ವಿಗ್ರಹ ಪ್ರತಿಷ್ಠಾಪನೆ

Mysuru - Desk - Naveen Kumar H P

ಕುಶಾಲನಗರ : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸೆ ಗ್ರಾಮದಲ್ಲಿ ದೇವಿರಮ್ಮ, ವೀರಭದ್ರೇಶ್ವರ ದೇವಾಲಯ ಸಮಿತಿಯಿಂದ ಮೂರು ದಿನಗಳ ಪೂಜಾ ಕೈಂಕರ್ಯಗಳೊಂದಿಗೆ ಹುಲಸೆ ಗ್ರಾಮದಲ್ಲಿ ಶ್ರೀ ದೇವಿರಮ್ಮ, ಶ್ರೀ ವೀರಭದ್ರೇಶ್ವರ ಮತ್ತು ನಾಗ ದೇವರ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.


ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ಕಾವೇರಿ ನದಿಯಿಂದ ಕಳಸದೊಂದಿಗೆ ಪವಿತ್ರ ಗಂಗೆಯನ್ನು ತಂದು ಶ್ರೀ ದೇವಿರಮ್ಮ ಮತ್ತು ವೀರಭದ್ರ ಸ್ವಾಮಿಗೆ ಅಭಿಷೇಕ ಸೇರಿದಂತೆ ಮೂರು ದಿನಗಳವರೆಗೆ ದೇವಾಲಯದ ಆವರಣದಲ್ಲಿ ಕೇರಳದ ಗೋಪಾಲ್ ಕೇದಲಾಯೆಲ್ ಮತ್ತು ಗಣೇಶ್ ಉಪಾಧ್ಯಾಯ ತಂಡದವರಿಂದ ವಿವಿಧ ಹೋಮ ಹವನ, ಪೂಜಾ ಕೈಂಕರ್ಯಗಳನ್ನು ನಡೆಸುವುದರ ಮೂಲಕ ದೇವರುಗಳ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕೂಡಿಗೆ, ಹೆಬ್ಬಾಲೆ, ಹುಲಸೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಅಗಮಿಸಿದ್ಧ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಇ. ರಾಮಣ್ಣ, ಕಾರ್ಯದರ್ಶಿ ಎಚ್. ಸಿ. ಚಂದ್ರು, ಉಪಾಧ್ಯಕ್ಷ ದೇವಯ್ಯ, ನಿರ್ದೇಶಕರಾದ ಜಯ, ಎಚ್. ಇ. ರಾಜು, ಶಿವಪ್ಪ ಸೇರಿದಂತೆ ಸಮಿತಿಯ ಸದಸ್ಯರು, ಗ್ರಾಮಸ್ಥರು, ಭಕ್ತರು ಇದ್ದರು.