Yakshagana : ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲ ಸೇರಿ ಮಹಾನಗರಿ ಬೆಂಗಳೂರಿನಲ್ಲಿ ಸಂಯೋಜಿಸಿದ ನಾಲ್ಕನೇ ವರ್ಷದ ಯಕ್ಷಗಾನ ಬಯಲಾಟ ಯಶಸ್ವಿಯಾಯಿತು. ನವೆಂಬರ್ 9ನೇ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಡಿಬಂದ ಕಮಲಶಿಲೆ ಯಕ್ಷಗಾನ ಮೇಳದ ಸಾಂಪ್ರದಾಯಿಕ ರಂಗಸ್ಥಳ ಮತ್ತು ಪುಷ್ಪಾಲಂಕೃತ ಬೆಳ್ಳಿ ತೊಟ್ಟಿಲ ಸೊಬಗಿನಲ್ಲಿ ಮೇರೈಸಿದ ಯಶಸ್ವಿ ಪ್ರದರ್ಶನ ಕಮಲಶಿಲೆ ಯಕ್ಷೋತ್ಸವ 2024.
ಹಿರಿಯ ಭಾಗವತ ಕಿಗ್ಗ ಹಿರಣ್ಣಯ್ಯ ಆಚಾರ್ ಮತ್ತು ಯುವ ಭಾಗವತ ಗಣೇಶ್ ಶೆಟ್ಟಿ ಬೆಪ್ಡಿ ಹಾಗೂ ಗಣೇಶ್ ಬಿಲ್ಯಾಡಿ ಯವರ 'ಹಳಬೇರು-ಹೊಸ ಚಿಗುರು' ಸಮಾಗಮಕ್ಕೆ ಮೆರುಗುತಂದ ಚಂಡೆ-ಮದ್ದಳೆ ಮತ್ತು ಕಾಡು ದೇವಡಿಗರ ಅದ್ಭುತ ನಾದಸ್ವರದ ಜೇಂಕಾರ. ಮಧು-ಕೈಟಭ, ಚಂಡ-ಮುಂಡ, ಶುಂಭ ಮತ್ತು ಕಲಿ ರಕ್ತಬೀಜರ ಸಾಂಪ್ರದಾಯಕ ಬಡಗು ತಿಟ್ಟಿನ ವೇಷ - ಕುಣಿತ ಮಹಾನಗರಿ ಪ್ರೇಕ್ಷಕರ ಮನಸೋರೆಗೊಳಿಸಿದೆ.
ಸರ್ವಶ್ರೀ ಉಪ್ಪುಂದ ನಾಗೇಂದ್ರರ ವಿದ್ಯುನ್ಮಾಲಿ, ಮಹಿಷಾಸುರ, ಶ್ರೀದೇವಿ ಮತ್ತು 65 ಹರೆಯದ ಕೊಚ್ಚಾಡಿ ರಾಮ ದೇವಾಡಿಗರ ರಕ್ತೇಶ್ವರಿ ಪಾತ್ರಗಳ ವೇಷಾಲಂಕಾರ ಮತ್ತು ಆಂಗೀಕ ಅಭಿನಯ ಯಶಸ್ವಿ ಪ್ರದರ್ಶನದ ಕೇಂದ್ರ ಬಿಂದು.
ಪ್ರತಿಯೊಬ್ಬ ವೇಷದಾರಿಯ ರಂಗ ಚಟುವಟಿಕೆ, ವೇಷ ಭೂಷಣಗಳು, ಕಲಾ ನೈಪುಣ್ಯತೆ, ಕಲಾವಿದರ ತಾರಾ ಮೌಲ್ಯ ಮತ್ತು ಮನೋಜ್ಞ ಅಭಿನಯಕ್ಕೆ ಮನಸೋತ ಮಹಾನಗರಿ ಬೆಂಗಳೂರು.
ಕಮಲಶಿಲೆ ಯಕ್ಷಗಾನ ಸೇವೆಯನ್ನು ಮಹಾನಗರಿಯಲ್ಲಿ ಪ್ರದರ್ಶಿಸುವ ಕನಸು ಹೊತ್ತ ಶ್ರೀ ಬ್ರಾಹ್ಮೀ ಭಕ್ತವೃಂದ ಬೆಂಗಳೂರಿನ ಸಹೃದಯೀ ಮನಸುಗಳ ನಾಲ್ಕನೇ ವರ್ಷದ ಯಕ್ಷಗಾನ ಸಂಯೋಜನೆ. ಕಮಲಶಿಲೆ ಯಕ್ಷೋತ್ಸವ 2024 ಸಂಪೂರ್ಣ ಬಡಗುತ್ತಿಟ್ಟಿನ ಶೈಲಿಯಲ್ಲಿನ ದೇವಿ ಮಹಾತ್ಮೆ ಪ್ರಸಂಗವನ್ನು ಒಪ್ಪಿ ಅಪ್ಪಿ ಕಣ್ತುಂಬಿಕೊಂಡು ಯಶಸ್ವಿಗೊಳಿಸಿದ ಮಹಾನಗರಿ ಬೆಂಗಳೂರಿನ ನೂರಾರು ಯಕ್ಷರಸಿಕರು.