ಜಿಲ್ಲೆ

ಸಂಭ್ರಮದಿಂದ ಶ್ರೀ ದತ್ತ ಜಯಂತಿ ಆಚರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಶ್ರೀ ದತ್ತ ಜಯಂತಿ ಮಹೋತ್ಸವ ನಿಮಿತ್ತ ನಗರದ ಗಾಂಧಿಚೌಕ್​ನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ದತ್ತ ಮಹಾರಾಜರ ತೊಟ್ಟಿಲೋತ್ಸವವು ಸಂಭ್ರಮದಿಂದ ನೆರವೇರಿತು.

ದತ್ತ ಜಯಂತಿ ನಿಮಿತ್ತ 8 ದಿನಗಳ ಕಾಲ ನಡೆದ ಅಖಂಡ ದಿಗಂಬರ ನಾಮ ಸಪ್ತಾಹವು ಶನಿವಾರ ಬೆಳಗ್ಗೆ ಸಂಪನ್ನಗೊಂಡಿತು. ಬಳಿಕ ದೇವರಿಗೆ ಅಭಿಷೇಕ, ಪೂಜೆ, ಬಳಿಕ ದತ್ತಯಾಗ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿದವು. ಸಂಜೆ 6.10ಕ್ಕೆ ಶ್ರೀ ದತ್ತ ಮಹಾರಾಜರ ತೊಟ್ಟಿಲೋತ್ಸವ, ಮಹಾಮಂಗಳಾರತಿ, ಬೆಳ್ಳಿ ಪಲ್ಲಕ್ಕಿ ಸೇವೆ ಸೇರಿ ವಿವಿಧ ಸೇವೆಗಳು ನಡೆದವು.

ಸುಮಾರು 10 ದಿನಗಳ ಕಾಲ ದೇವಸ್ಥಾನದಲ್ಲಿ ಬೆಳಗ್ಗೆ ಮಹಾಗಣಪತಿ ಹೋಮ, ಪವಮಾನ ಹೋಮ, ರುದ್ರಸ್ವಾಹಾಕಾರ ಹೋಮ, ಧನ್ವಂತರಿ ಹೋಮ, ಕುಂಕುಮಾರ್ಚನೆ, ಅನ್ನಪೂರ್ಣೇಶ್ವರಿ ಹೋಮಗಳು, ಮಧುಕರಿ ಸೇವೆಗಳು ನೆರವೇರಿದರೆ, ನಿತ್ಯ ಸಂಜೆ ನಾಗಲಕ್ಷ್ಮೀ ಮೈಸೂರು ಅವರಿಂದ ಹರಿಕೀರ್ತನೆ, ಐಶ್ವರ್ಯ ದೇಸಾಯಿ ಅವರಿಂದ ಸಂಗೀತ, ಸಾಕೇತ ಜೋಗಳೇಕರ ಅವರಿಂದ ಕೊಳಲು ಹಾಗೂ ಅನಿರುದ್ಧ ಜೋಶಿ ತಬಲಾ ವಾದನ ಪ್ರಸ್ತುತಪಡಿಸಿದರು.

ಸಂಸ್ಥೆ ಅಧ್ಯಕ್ಷ ಪ್ರಕಾಶ ದೇಸಾಯಿ, ಉಪಾಧ್ಯಕ್ಷ ಕೃಷ್ಣಾ ಪಾಟೀಲ, ಗೌರವ ಕಾರ್ಯದರ್ಶಿ ರವಿ ನರಗುಂದ, ಖಜಾಂಚಿ ಸಂಜೀವ ಕುಲಕರ್ಣಿ, ಸದಸ್ಯರಾದ ಹನುಮಂತ ಕಿತ್ತೂರ, ಅನಂತ ಗೋಡಖಿಂಡಿ, ನಂದು ಜೋಶಿ, ಪ್ರಭಾಕರ ಗದ್ರೆ, ಶೇಖರ ಜಾಧವ, ಶ್ರೀಪಾದ ದೇಶಪಾಂಡೆ, ಸಂಜಯ ಪಾಟೀಲ, ಇತರರು ಇದ್ದರು.