ಚಪ್ಪರದಹಳ್ಳಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವಿಯ ವಿಶೇಷ ಉತ್ಸವ ಜರುಗಿತು. 
ಜಿಲ್ಲೆ

ಚಪ್ಪರದಹಳ್ಳಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಉತ್ಸವ

ನಾಗೇಶ ಎಸ್

ಬೆಟ್ಟದಪುರ: ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಿದ್ದ ದೇವಿಯ ಎರಡನೇ ವರ್ಷದ ವಾರ್ಷಿಕೋತ್ಸವ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮ ಕೆರೆಯಲ್ಲಿ ಗಂಗಾ ಸ್ನಾನ ಹಾಗೂ ಪೂಜೆ ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ಪಲ್ಲಕಿ ಉತ್ಸವದ ಮೇಲೆ ಪ್ರತಿಷ್ಠಾಪಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಿಲ್ಲಿ ಪೂರ್ಣಕುಂಭ ಹಾಗೂ ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಗ್ರಾಮದ ಭಕ್ತರು ಮನೆಯ ಮುಂದೆ ಶುಚಿಗೊಳಿಸಿ, ರಂಗೋಲಿ ಬಿಟ್ಟು ದೇವಿಗೆ ಸ್ವಾಗತಿಸಿದರು.

ದೇವಸ್ಥಾನದಲ್ಲಿ ವಿವಿಧ ಪೂಜೆ, ಅಭಿಷೇಕಗಳು ಅರ್ಚಕ ಮಂಜುನಾಥ್ ಆರಾಧ್ಯ ನೇತೃತ್ವದಲ್ಲಿ ಜರುಗಿದವು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಸಮಿತಿ ವತಿಯಿಂದ ಪ್ರಸಾದ ವಿತರಿಸಲಾಯಿತು.