ಹಿರೀಸಾವೆ ಹೋಬಳಿಯ ಪುರಾಣಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಮಠದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಪುತ್ರ ಸ್ವಾಮೀಜಿ ಇದ್ದರು. 
ಜಿಲ್ಲೆ

ನಾಳೆಯಿಂದ ಶ್ರೀ ಬಸವೇಶ್ವರಸ್ವಾಮಿ ಜಾತ್ರೋತ್ಸವ

ಹಿರೀಸಾವೆ: ಶ್ರೀಕ್ಷೇತ್ರದ ಕಬ್ಬಳಿ ಮಠದಲ್ಲಿ ನ.1ರಿಂದ ನ.5ರವರೆಗೆ 5 ದಿನಗಳ ಕಾಲ ಶ್ರೀ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವನನ್ನು ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ನ.1ರಂದು ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸನ್ನಿಧಿಯ ಆವರಣದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಬಸವೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಲಿದ್ದು, ಗೋಪೂಜೆ ನೆರವೇರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಸಂಜೆ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿದೆ. ನ.2ರಂದು ಬೆಳಗ್ಗೆ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6.30ರಿಂದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನ.3ರಂದು ಬೆಳಗ್ಗೆ ಚುಂಚಶ್ರೀಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನ ಉದ್ಯಮಿ ಪ್ರದೀಪಾ- ವೆಂಕಟೇಶ ಪ್ರಸಾದ್ ಕುಟುಂಬದವರಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ. ಸಂಜೆಗೆ ಶ್ರೀ ಬಸವೇಶ್ವರಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿದೇವಿ ಉತ್ಸವ, ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ, ನಂತರ ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ವೈಭವದಿಂದ ಜರುಗಲಿದೆ. ನಂತರ ಧಾರ್ಮಿಕ ಸಭೆ, ಚುಂಚಶ್ರೀಗಳಿಗೆ ಪುಷ್ಪವೃಷ್ಟಿ ನಡೆಯಲಿದೆ ಎಂದರು.

ನ.4ರಂದು ಬೆಳಗ್ಗೆ ಭಕ್ತರಿಂದ ಬಸವೋತ್ಸವ ಹಾಗೂ ಸಂಜೆ ಖ್ಯಾತ ವಾಗ್ಮಿ ಶಿವಾರ ಉಮೇಶ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನ.5ರಂದು ಬೆಳಗ್ಗೆ ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ 5 ಗಂಟೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ ಧರ್ಮಧ್ವಜ ಅವರೋಹಣ, ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಊರಿನ ರಾಜಬೀದಿಯಲ್ಲಿರುವ ಮೆರೆವಿಗ್ರಹ ದೇಗುಲಕ್ಕೆ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದರು.

ಎರಡು ವರ್ಷಗಳ ಹಿಂದೆ ಜಾತ್ರಾ ಮಹೋತ್ಸವದ ಸಮಯದಲ್ಲಿ ಕಬ್ಬಳಿ ಗ್ರಾಮಸ್ಥರು ಹಾಗೂ ಸಮಸ್ತ ಭಕ್ತರ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸುತ್ತಮುತ್ತಲ ಗ್ರಾಮಗಳಿಂದ ರೈತರು ತಮ್ಮ ಜಾನುವಾರುಗಳನ್ನು ಶ್ರೀಕ್ಷೇತ್ರದ ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿಸಿ ತೀರ್ಥ ಪ್ರೋಕ್ಷಣೆ ಮಾಡಿಸುವುದು ವಿಶೇಷ. ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು ನೀರು, ನೆರಳು ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಎಂದಿನಂತೆಯೇ ಮಾಡಲಾಗುವುದು ಎಂದು ತಿಳಿಸಿದರು.

ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಇದ್ದರು.