ಶ್ರೀ ಬಸವೇಶ್ವರ ಮೂರ್ತಿ ಹಾಗೂ ಶ್ರೀ ಗುರುಮಲ್ಲೇಶ್ವರ ಮೂರ್ತಿ ಮೆರವಣಿಗೆ ಕನಕಪುರ ಮಠದ ಚೆನ್ನಬಸವ ಸ್ವಾಮೀಜಿ, ಕಾಮಗೆರೆ ಪಟ್ಟದ ಮಠದ ಶ್ರೀ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. 
ಜಿಲ್ಲೆ

ಶ್ರೀ ಬಸವೇಶ್ವರಮೂರ್ತಿ ವಿಜೃಂಭಣೆಯ ಮೆರವಣಿಗೆ

ಕೊಳ್ಳೇಗಾಲ: ತಾಲೂಕಿನ ಕೊಂಗರಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾನುವಾರ ಶ್ರೀ ಬಸವೇಶ್ವರ ಮೂರ್ತಿ ಹಾಗೂ ಶ್ರೀ ಗುರುಮಲ್ಲೇಶ್ವರ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಇದಕ್ಕೂ ಮುನ್ನ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ ಲಿಂಗೈಕ್ಯ ಶ್ರೀ ಬಸಪ್ಪ ದೇವರು ಸ್ವಾಮಿಗಳ ಗದ್ದುಗೆಗೆ ಬಸವೇಶ್ವರಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಕನಕಪುರ ಮಠದ ಚೆನ್ನಬಸವ ಸ್ವಾಮೀಜಿ, ಕಾಮಗೆರೆ ಪಟ್ಟದ ಮಠದ ಶ್ರೀ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೆಳಗ್ಗೆ 10 ಗಂಟೆಗೆ ಪಟ್ಸ್ಥಲ ಧ್ವಜಾರೋಹಣ ನಡೆಯಿತು.

ನಂತರ, ಸಂಜೆ 4 ಗಂಟೆಗೆ ತೆರೆದ ವಾಹನದಲ್ಲಿ ಶ್ರೀ ಬಸವೇಶ್ವರ ಮೂರ್ತಿ ಹಾಗೂ ಶ್ರೀ ಗುರುಮಲ್ಲೇಶ್ವರ ಮೂರ್ತಿ ಇರಿಸಿ ಮಂಗಳವಾದ್ಯದ ಇಮ್ಮೇಳದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ನಂದಿ ಕಂಬ ಉತ್ಸವ ಗಮನ ಸೆಳೆಯಿತು. ಸುಮಾರು 6.50 ರಲ್ಲಿ ಶುಭ ಗೋಧೂಳಿ ಲಗ್ನದಲ್ಲಿ ನೂತನ ಆಲಯದ ದ್ವಾರವನ್ನು ಬಸವ, ಹಸು-ಕರುಗಳು ಪ್ರವೇಶಿಸಿತು. ಶ್ರೀ ಮಠದಲ್ಲಿ ದಿನವಿಡಿ ವಿಶೇಷ ಪೂಜಾ ಕೆಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನಡೆಯಿತು.

ಕೊಂಗರಹಳ್ಳಿ, ಕಾಮಗೆರೆ ಗ್ರಾಮಸ್ಥರು, ಶ್ರೀ ಬಸವ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.