ಜಿಲ್ಲೆ

ಶ್ರೀ ಬನಶಂಕರಿ ದೇವಿ ರಥೋತ್ಸವ

ಧಾರವಾಡ: ಇಲ್ಲಿನ ನವಲೂರಿನ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ಜರುಗಿತು. ರಥಸಪ್ತಮಿ ದಿನವಾದ ಮಂಗಳವಾರ ಜರುಗಿದ ಶ್ರೀದೇವಿಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮತ್ತೈದೆಯರಿಂದ ವಾದ್ಯಮೇಳದೊಂದಿಗೆ ಪೂರ್ಣಕುಂಭ ಮೆರವಣಿಗೆ, ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ದೇವಿಯ ತೊಟ್ಟಿಲೋತ್ಸವ ಹಾಗೂ ಅನ್ನಸಂತರ್ಪಣೆ ಜರುಗಿತು. ಸಂಜೆ 5ಗಂಟೆಗೆ ಸಕಲ ಭಕ್ತರೊಂದಿಗೆ ರಥೋತ್ಸವ ನೆರವೇರಿತು. ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಧಾರವಾಡ, ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದರು. ದೇವಿಗೆ ಉಡಿ ತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಂಜೆ 7 ಗಂಟೆಗೆ ಗುರು ರಾಘವೇಂದ್ರ ಆರ್ಕೆಸ್ಟ್ರಾ ಗೋಕಾಕ್ ಫಾಲ್ಸ್ ಮತ್ತು ಹಾಸ್ಯ ಕಲಾವಿದ ಲಪಂಗ್ ರಾಜಾ ತಂಡದಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.