ಜಿಲ್ಲೆ

ಮೈಸೂರಿನಲ್ಲಿ ಶ್ರೀಶಿವಾನಂದ ಸ್ವಾಮೀಜಿ ಬರ್ಬರ ಹತ್ಯೆ

ಮಂಜುನಾಥ ತಿಮ್ಮಯ್ಯ

ಮೈಸೂರು: ನಗರದ ಸಿದ್ಧಾರ್ಥನಗರ ಬಡಾವಣೆಯ ಅನ್ನದಾನೇಶ್ವರ ಮಹಾಸಂಸ್ಥಾನ ಮಠದಲ್ಲಿ ಶ್ರೀ ಶಿವಾನಂದ ಸ್ವಾಮೀಜಿ(90) ಅವರನ್ನು ಸೋಮವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಮಠದ ಕೋಣೆಯಲ್ಲಿ ಮಂಚದ ಮೇಲೆ ಸ್ವಾಮೀಜಿಯ ಶವ ಪತ್ತೆಯಾಗಿದೆ. ಶವದ ಬಳಿಯೇ ಶ್ರೀಗಳ ಆಪ್ತ ಸಹಾಯಕ ರವಿ(61) ಮದ್ಯದ ಅಮಲಿನಲ್ಲಿ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.


ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ತಿ.ನರಸೀಪುರ ತಾಲೂಕು ಉಕ್ಕಲಗೆರೆ ಗ್ರಾಮದ ನಿವಾಸಿ ರವಿಯೇ ಸ್ವಾಮೀಜಿಯ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಸ್ವಾಮೀಜಿಯ ಮೊಮ್ಮಗ ದುಷ್ಯಂತ್ ದೂರು ನೀಡಿದ್ದಾರೆ.


ಕಳೆದ ಮೂರು ವರ್ಷಗಳಿಂದ ರವಿ ಅವರು ಸ್ವಾಮೀಜಿಯ ಆಪ್ತ ಸಹಾಯಕನಾಗಿ ಮಠದಲ್ಲಿ ಕೆಲಸ ಮಾಡಿಕೊಂಡಿದ್ದ. ಜತೆಗೆ ಮಠದ ಭದ್ರತಾ ಕಾರ್ಯವನ್ನೂ ಮಾಡುತ್ತಿದ್ದ. ಸೋಮವಾರ ಊಟ ತೆಗೆದುಕೊಂಡು ಹೋಗಲು ಸ್ವಾಮೀಜಿಯ ಆಪ್ತ ಸಹಾಯಕ ರವಿ ಬಾರದೆ ಇರುವುದನ್ನು ಕಂಡು ಸ್ವಾಮೀಜಿ ಮೊಮ್ಮಗ ದುಷ್ಯಂತ್ ಊಟದೊಂದಿಗೆ ಮಠಕ್ಕೆ ತೆರಳಿದ್ದಾರೆ.


ಮಠದ ಕೋಣೆಯ ಮಂಚದಲ್ಲಿ ರಕ್ತಸಿಕ್ತವಾಗಿ ಸ್ವಾಮೀಜಿ ಅವರ ಶವ ಬಿದ್ದಿದ್ದರೆ ಹೊರಗೆ ವಿಷ ಕುಡಿದಿದ್ದ ರವಿ ಬಿದ್ದಿದ್ದ. ತಕ್ಷಣ ದುಷ್ಯತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಎಂ.ಮುತ್ತುರಾಜು, ಜಾಹ್ನವಿ ಪರಿಶೀಲನೆ ನಡೆಸಿದರು. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಿಷ ಕುಡಿದಿರುವ ರವಿಯನ್ನು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಪ್ರಜ್ಞೆ ಬಂದ ಬಳಿಕ ಸ್ವಾಮೀಜಿ ಅವರ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿವಾದ ಶಂಕೆ


ಈ ನಡುವೆ, ಶ್ರೀಗಳ ಹೆಸರಿನಲ್ಲಿ ಸಾಕಷ್ಟು ಆಸ್ತಿಗಳಿವೆ. ಈ ಆಸ್ತಿ ವಿವಾದಿಂದಲೇ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ. ಜತೆಗೆ, ಆಪ್ತ ಸಹಾಯಕನಾಗಿದ್ದ ರವಿ ಅವನ ಕೌಟುಂಬಿಕ ಸಮಸ್ಯೆ ಬಗ್ಗೆ ಶ್ರೀಗಳು ಬುದ್ಧಿವಾದ ಹೇಳಿದ್ದರೆನ್ನಲಾಗಿದ್ದು, ಕೊಲೆಗೆ ಇದೂ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.