ಜಿಲ್ಲೆ

ಶ್ರೀಜಗೆ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ

ಮಡಿಕೇರಿ: ನಗರದ ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಕೊಡಗು ಜಿಲ್ಲಾಮಟ್ಟದ ೩೧ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಜಳಿಗೆ ಬಾಲ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.


ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ(ಎನ್.ಸಿ.ಎಸ್.ಟಿ.ಸಿ.), ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಕಲುಷಿತಗೊಳ್ಳುತ್ತಿರುವ ನದಿಯ ತೀರಗಳು ಎಂಬ ವಿಷಯದ ಕುರಿತು ಉತ್ತಮವಾಗಿ ವೈಜ್ಞಾನಿಕಯನ್ನು ಯೋಜನಾ ಪ್ರಬಂಧ ಮಂಡಿಸಿದ ವಿದ್ಯಾರ್ಥಿನಿ ಎ.ಎಸ್.ಶ್ರೀಜಳಿಗೆ ಬಾಲ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.


ಜನವರಿ ಮೊದಲ ವಾರ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲಾಮಟ್ಟದಿಂದ ಎಂಟು ಕಿರಿಯ ವಿಜ್ಞಾನಿಗಳು ಆಯ್ಕೆಗೊಂಡಿದ್ದಾರೆ. ತಂಡದ ನಾಯಕರು ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ವೈಜ್ಞಾನಿಕ ಪ್ರಬಂಧ ಮಂಡಿಸಲು ಅರ್ಹತೆ ಪಡೆದಿದ್ದಾರೆ.


ನಗರ ಕಿರಿಯ ವಿಭಾಗದಲ್ಲಿ ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ಮತ್ತು ಶ್ಲೋಕ್ ಅಯ್ಯಪ್ಪಜೇನು ಕೃಷಿಯ ಮಹತ್ವ ಕುರಿತು ಶಿಕ್ಷಕಿ ಎಂ.ಎಸ್.ಶೃತಿ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದರು. ಇದೇ ಶಾಲೆಯ ಎಂ.ಪಿ.ಯಾಶಿಕ ಶೆಟ್ಟಿ ಮತ್ತು ಯಶ್ ಕಾರಿಯಪ್ಪ(ಪರಿಸರ ವ್ಯವಸ್ಥೆಯಲ್ಲಿ ಏಡಿಗಳ ಕ್ಷೀಣಿಸುವಿಕೆ ಕುರಿತು ಪ್ರಬಂಧ ಮಂಡಿಸಿದರು.


ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶ ಮತ್ತು ಟಿ.ಎಸ್.ಶೃಜನ್ಯಕಲುಷಿತಗೊಳ್ಳುತ್ತಿರುವ ನದಿ ತೀರಗಳು ಕುರಿತು ಪ್ರಬಂಧ ಮಂಡಿಸಿದರೆ, ಪೊನ್ನಂಪೇಟೆ ಬಳಿಯ ಕಿರಗೂರು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ.ಶ್ರೇಯಸ್ ಮತ್ತು ವೈ.ಆರ್.ಕೃತಿಕ್ ಮಾರಕವಾದ ಪ್ಲಾಸ್ಟಿಕ್-ಪುನರ್ ಬಳಕೆ ಹಾದಿಯಲ್ಲಿ ಕುರಿತು ಮಂಡಿಸಿದರು.


ಗ್ರಾಮಾಂತರ ಹಿರಿಯ ವಿಭಾಗದಲ್ಲಿ ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ, ಕಾಡಾನೆಗಳ ಸುಳಿಯಲ್ಲಿ ರೈತಾಪಿ ಜನ ಕುರಿತು ಮಂಡಿಸಿದರು. ತೊರೆನೂರು ಸರ್ಕಾರಿ ಪ್ರೌಢಶಾಲೆಯ ಟಿ.ಎ.ಪುಷ್ಪ ಮತ್ತು ಎ.ಆರ್.ಪೂರ್ವಿಕ ಸೊಳ್ಳೆಗಳ ಚೆಲ್ಲಾಟ ಜನರಿಗೆ ಪ್ರಾಣ ಸಂಕಟ ಕುರಿತು ಮಂಡಿಸಿದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಮತ್ತು ಕೆ.ವಿ.ಇಶ್ರತ್ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ ಆರೋಗ್ಯ ಕಾಪಾಡಿ ವಿಷಯದ ಕುರಿತು ಮಂಡಿಸಿದರು.


ನಗರ ಹಿರಿಯ ವಿಭಾಗದಲ್ಲಿ ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಪಿ.ವಿ.ಲಕ್ಷ್ಯ ಮತ್ತು ಎಂ.ಭವಿಷ್ಯ ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ. ಬದುಕಿ ಮತ್ತು ನಮ್ಮನ್ನು ಬದುಕಲು ಬಿಡಿ-ಆನೆಗಳ ಜತೆ ಸಹಬಾಳ್ವೆ ಜೀವನಕ್ಕೆ ಕರೆ ಕುರಿತು ಪ್ರಬಂಧ ಮಂಡಿಸಿದರು.


ಪ್ರಶಸ್ತಿ ಪ್ರದಾನ: ಜಿಲ್ಲಾಮಟ್ಡದ ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಜ ಳಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್ ಬಾಲ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಿದರು.


ಪ್ರಶಸ್ತಿ ಪತ್ರ ವಿತರಿಸಿದ ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಕುತೂಹಲ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವದೊಂದಿಗೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.


ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳಿಗೆ ವಿಜ್ಞಾನ ಸಮಾವೇಶವು ಭವಿಷ್ಯದ ಬಾಲ ವಿಜ್ಞಾನಿಗಳಾಗಿ ರೂಪುಗೊಳ್ಳಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದರು.


ಸಂಸ್ಥೆಯ ಪ್ರಾಂಶುಪಾಲ ಕೆ.ಎಸ್.ಸುಮಿತ್ರ, ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್, ಭಾರತ್ ಸ್ಕೌಟ್ಸ್-ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮತ್ತು ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕರೆಸ್ಪಾಂಡೆಂಟ್ ಮುನಿರ್ ಅಹ್ಮದ್ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.


ಸಂಸ್ಥೆಯ ಆಡಳಿತಾಧಿಕಾರಿ ಪಿ.ರವಿ ಮತ್ತು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ನವೀನ್ ಗೌಡ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ರೋಟರಿ ವುಡ್ಸ್‌ನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ವಿಜ್ಞಾನ ಪರಿಷತ್ತಿನ ಪದಾಧಿಕಾರಿ ಎಂ.ಎನ್.ವೆಂಕಟನಾಯಕ್, ಸದಸ್ಯರಾದ ಜಿ.ಶ್ರೀನಾಥ್, ಎಸ್.ಎಚ್.ಈಶ, ಟಿ.ವಿ.ಶೈಲಾ, ಗೈಡ್ಸ್ ಕ್ಯಾಪ್ಟನ್ ಸಿ.ಎಂ.ಸುಲೋಚನ ಇತರರು ಇದ್ದರು.