ಜಿಲ್ಲೆ

ವಿಜೃಂಭಣೆಯ ಕಬ್ಬಳಿ ಶ್ರೀಬಸವೇಶ್ವರಸ್ವಾಮಿ ರಥೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಗ್ರಾಮದಲ್ಲಿ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಸೋಮವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡು ಮೊದಲಿಗೆ ಗಂಗಾಪೂಜೆ ಹಾಗೂ ವಿಘ್ನೇಶ್ವರ ಪೂಜೆ ಜರುಗಿತು. ದೇವರಿಗೆ ಬೆಳಗ್ಗೆ 7.30 ರಲ್ಲಿ ಕುಂಕುಮಾರ್ಚಣೆ, ಅಭಿಷೇಕ, ಪುಷ್ಪಾರ್ಚನೆ ಬಳಿಕ ವಿಶೇಷ ಪೂಜೆ ನಡೆಯಿತು. ದೇವಾಲಯಕ್ಕೆ ಹೂವಿನ ಚಪ್ಪರ ಹಾಕಲಾಗಿದೆ.

ದೇವರ ಉತ್ಸವ ಮೂರ್ತಿಗೆ ಒಡವೆ-ವಸ್ತ್ರಗಳಿಂದ ಅಲಂಕಾರ ಜರುಗಿತು. ರಾತ್ರಿ 7 ಗಂಟೆ ಸುಮಾರಿನಲ್ಲಿ ಬೋರೆ ಮೇಗಲ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಿಂದ ಮಂಗಳವಾಧ್ಯದೊಂದಿಗೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಪ್ರಮುಖ ಬೀದಿಯಲ್ಲಿ ಸಾಗಿದ್ದು ಕಬ್ಬಳ್ಳಿ ಗ್ರಾಮಕ್ಕೆ ಕರೆತಂದು ವಿದ್ಯುತ್ ಹಾಗೂ ವಿವಿಧ ಬಗೆಯ ಪುಷ್ವಗಳಿಂದ ಸಿಂಗರಿಸಿದ್ದ ರಥದ ಮೇಲೆ ಶ್ರೀ ಬಸವೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು.

ರಾತ್ರಿ 8 ಗಂಟೆಗೆ ಶ್ರೀಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಶ್ರೀ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಂಪ್ರದಾಯದಂತೆ ಗ್ರಾಮದ ಹಿರಿಯರೊಬ್ಬರು ರಥದ ಎದುರಿನಲ್ಲಿ ನೆಡಲಾಗಿದ್ದ ಬಾಳೆಕಂದನ್ನು ವೀರಕತ್ತಿಯಿಂದ ಕತ್ತರಿಸುತ್ತಿದಂತೆಯೇ ಸಾವಿರಾರು ಭಕ್ತರು ಜೈಂಕಾರದೊಂದಿಗೆ ರಾಜಬೀದಿಯಲ್ಲಿ ರಥ ಎಳೆದರು. ನೆರೆದಿದ್ದ ಭಕ್ತರು ರಥದ ಮೇಲೆ ಬಾಳೆಹಣ್ಣು, ಹೂ, ಬಿಲ್ವಪತ್ರೆ, ದವನ ಎಸೆದು ಭಕ್ತಿ-ಭಾವ ಮೆರೆದರು.

ಸಹಸ್ರ ಈಡುಗಾಯಿ: ಗ್ರಾಮದ ರಾಜಬೀದಿಯಲ್ಲಿ ರಥೋತ್ಸವ ಮುಗಿದ ಬಳಿಕ ಭಕ್ತರು ರಥದ ಎರಡು ಕಡೆಯಲ್ಲಿರುವ ನಾಲ್ಕು ಕಲ್ಲಿನ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ಹರಕೆ ಸಲ್ಲಿಸಿದರು. ತಾಲೂಕಿನ ವ್ಯಾಪ್ತಿಯಲ್ಲಿ ಉತ್ತಮ ಮಳೆ, ಬೆಳೆಯೊಂದಿಗೆ ಜಾನುವಾರುಗಳನ್ನು ಕಾಯುತ್ತಿದ್ದಾನೆ ಎಂಬ ಬಲವಾದ ನಂಬಿಕೆ ಭಕ್ತರಾಗಿದ್ದು, ರಾತ್ರಿ 8.15 ರಿಂದ 9 ರವರೆಗೆ ಸುಮಾರು ಭಕ್ತರು 6 ಸಾವಿರಕ್ಕೂ ಹೆಚ್ಚು ಈಡುಕಾಯಿ ಒಡೆದು ಸಂಭ್ರಮಿಸಿದರು.

ರಂಗಕುಣಿತ: ಫೆ.24 ರಂದು ರಾತ್ರಿ 9.30 ರಲ್ಲಿ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಬಾಳೆಕಂಬವನ್ನು ಪ್ರತಿಷ್ಠಾಪಿಸುವ ಮೂಲ ರಂಗಕುಣಿತಕ್ಕೆ ಚಾಲನೆ ದೊರೆತಿದ್ದು ರಂಗಬೀದಿಯಲ್ಲಿ ದಿನನಿತ್ಯ ರಾತ್ರಿ ರಂಗಕುಣಿತ ನಡೆಯುತಿತ್ತು, ಅಂತಿಮ ದಿನವಾದ ಸೋಮವಾರ ರಾತ್ರಿ ರಥೋತ್ಸವದ ನಂತರ ಒಂದು ಗಂಟೆ ಕಾಲ ಮುಕ್ತಾಯದ ರಂಗಕುಣಿತ ನಡೆಯಿತು.

ಶ್ರೀಕ್ಷೇತ್ರದಲ್ಲಿ ನಡೆದ ರಥೋತ್ಸವಕ್ಕೆ ತಿಪಟೂರು, ನಾಗಮಂಗಲ, ತುರುವೇಕೆರೆ, ಅರಸೀಕೆರೆ ಸೇರಿ ವಿವಿಧೆಡೆಯಿಂದ ಸುಮಾರು 3 ರಿಂದ 4 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ರಥೋತ್ಸವದ ಬಳಿಕ ಸನ್ನಿಧಿಯಲ್ಲಿ ಶ್ರೀಬಸವೇಶ್ವರಸ್ವಾಮಿಗೆ ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿ ದರ್ಶನ ಪಡೆದು ಪುನೀತರಾದರು. ಉತ್ಸವ ಮುಗಿದ ಬಳಿಕ ಸ್ಥಳೀಯ ಕಲಾವಿದರಿಂದ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀಶಿವಪುತ್ರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಕಬ್ಬಳಿ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಭಾರತದ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ, ಗುಡಿಗೌಡ ಪ್ರಕಾಶ್ ಹಾಗೂ ಇತರರಿದ್ದರು. ರಥೋತ್ಸವಕ್ಕೆ ಹಿರೀಸಾವೆ ಪೊಲೀಸ್ ಸಿಬ್ಬಂದಿ ವರ್ಗ ಬಿಗಿಭಧ್ರತೆ ಒದಗಿಸಿತ್ತು.