ಜಿಲ್ಲೆ

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಸ್ಮರಣೆ

reportermys

ಮಡಿಕೇರಿ: ಭಾರತ-ಪಾಕಿಸ್ತಾನ ಯುದ್ಧದಲ್ಲಿ (೧೯೬೫) ವೀರ ಮರಣವನ್ನಪ್ಪಿಸಿದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಬುಧವಾರ ಪುಣ್ಯಸ್ಮರಣೆ ಆಚರಿಸಲಾಯಿತು.

ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ಸಹಯೋಗದಲ್ಲಿ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಗಣ್ಯರು, ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ನಿವೃತ್ತ ಸೇನಾಧಿಕಾರಿ ಏರ್ ಮಾರ್ಷಲ್ ಕೊಡಂದೇರ ನಂದ ಕಾರ್ಯಪ್ಪ (ನಿವೃತ್ತ) ಮಾತನಾಡಿ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಕೊಡವರು ಎನ್ನುವುದಕ್ಕಿಂತ ಮೊದಲು ಭಾರತೀಯರಾಗಿದ್ದಾರೆ. ದೇಶ ಸೇವೆ ಮೂಲಕ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಿವೃತ್ತ ಯೋಧರಿಗೆ ಹಾಗೂ ಮೃತಪಟ್ಟ ಯೋಧರ ಪತ್ನಿಗೆ ಸರ್ಕಾರದಿಂದ ಸಹಕಾರ ನೀಡುವಂತಾಗಬೇಕೆಂದರು.

ಅಜ್ಜಮಾಡ ಬಿ.ದೇವಯ್ಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕಟ್ಟಿ ಮಂದಯ್ಯ ಮಾತನಾಡಿ, ದೇವಯ್ಯ ಅವರ ೫೭ನೇ ಪುಣ್ಯಸ್ಮರಣೆ ಆಚರಿಸುತ್ತಿರುವುದು ಹೆಮ್ಮೆ ವಿಚಾರ. ೩೨ನೇ ವಯಸ್ಸಿನಲ್ಲಿ ದೇವಯ್ಯ ದೇಶ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿದ್ದಾರೆೆ. ಅವರ ತ್ಯಾಗ, ಬಲಿದಾನ ಅವಿಸ್ಮರಣೀಯ. ಮಹಾವೀರ ಚಕ್ರ ಪುರಸ್ಕೃತರಾಗಿರುವ ದೇವಯ್ಯ ಹೆಸರು ಚಿರಕಾಲ ಉಳಿಯಬೇಕೆಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ (ನಿವೃತ್ತ) ಮಾತನಾಡಿ, ಯೋಧರ ಪೌರುಷ, ತ್ಯಾಗದ ಸ್ಮರಣೆ ಕೊಡಗಿಗೆ ಮಾತ್ರ ಸೀಮಿತವಾಗಬಾರದು. ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಸರ್ಕಾರದ ಕರ್ತವ್ಯವಾಗಬೇಕು. ಆದರೆ, ಆಡಳಿತ ವ್ಯವಸ್ಥೆ ಜವಾಬ್ದಾರಿ ಮರೆತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ವೀರಶೂರರ ನಾಡು ಎಂದು ಕೀರ್ತಿ ಪಡೆದಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರಿಂದ ಕೊಡಗಿನ ಹೆಸರು ಪ್ರಪಂಚದಲ್ಲೇ ಗುರುತಿಸಿಕೊಳ್ಳುವಂತಾಗಿದೆ. ವೀರ ಸೇನಾನಿಗಳ ಆದರ್ಶ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಮಾತನಾಡಿ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಕಾಣಿಕೆಯನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಸ್ಮರಿಸುವಂತಾಗಬೇಕು. ಅವರ ಸಾಧನೆ ಮತ್ತು ಸ್ಫೂರ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಮಾತನಾಡಿ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಯುವಕರಿಗೆ ಮಾದರಿಯಾಗಿದ್ದಾರೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶ ಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಕೊಡಗು ಹೆಚ್ಚಿನ ಸಂಖ್ಯೆಯಲ್ಲಿ ವೀರ ಯೋಧರನ್ನು ಹೊಂದಿರುವುದು ಹೆಮ್ಮೆ ವಿಚಾರ. ಯುವಪೀಳಿಗೆ ದೇಶ ಸೇವೆ ಮಾಡುವಂತಾಗಲಿ ಎಂದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಕ್ಷಣಾ ಪಡೆಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಕರು ಅಗ್ನಿಪಥ್ ಯೋಜನೆ ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಗೆ ಮುಂದಾಗಬೇಕೆಂದರು.

ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಮಡಿಕೇರಿ ಕೊಡವ ಸಮಾಜ ಕಾರ್ಯದರ್ಶಿ ಕನ್ನಂಡ ಸಂಪತ್, ಅಜ್ಜಮಾಡ ಕುಟುಂಬ ಅಧ್ಯಕ್ಷ ಲವ ಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಜಿ.ಬೋಪಯ್ಯ, ಖಜಾಂಚಿ ಅಜ್ಜಮಾಡ ಟಿ.ಚಂಗಪ್ಪ, ಪ್ರಮುಖರಾದ ಡಾ.ಕುಶ್ವಂತ್ ಕೋಳಿಬೈಲು ಮತ್ತಿತರರು ಇದ್ದರು.

ಸೆ.೬ ರಂದು ಬಹುಮಾನ ವಿತರಣೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ಕೊಡವ ಮಕ್ಕಡ ಕೂಟದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೆ.೯ ರಂದು ಬಹುಮಾನ ವಿತರಿಸ ಲಾಗುತ್ತದೆ.

ನಗರದ ಸ್ಕೌಟ್ಸ್ ಗೈಡ್ ಭವನದಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಿ.ಎಸ್. ರಮೇಶ್ ವಹಿಸಲಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಮೇಜರ್ ಓಡಿಯಂಡ ಎಸ್.ಚಿಂಗಪ್ಪ (ನಿವೃತ್ತ), ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.