ಬನ್ನೂರು: ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಆರೋಹಣ ಸೆಂಟ್ರಲ್ ಸ್ಕೂಲಿನ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ತಿಳಿಸಿದರು.
ಪಟ್ಟಣದ ಸಮೀಪದ ಕುಳ್ಳನಕೊಪ್ಪಲು ಗ್ರಾಮದಲ್ಲಿರುವ ಆರೋಹಣ ಸೆಂಟ್ರಲ್ ಸ್ಕೂಲ್‌ನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು, ಉತ್ತಮ ತರಬೇತಿಯಿಂದ ವಿದ್ಯಾರ್ಥಿನಿಯರ ತಂಡ ದಸರಾ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕರ ತಂಡ ಸೋಸಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಕ್ರೀಡೆಯು ಕೇವಲ ಫಲಿತಾಂಶ ಬಗ್ಗೆ ಮಾತ್ರವಲ್ಲದೆ, ಕ್ರೀಡಾಪಟುಗಳು ಪ್ರದರ್ಶಿಸುವ ಕೌಶಲ, ಸಾಮರ್ಥ್ಯ, ಅವರ ಶೈಲಿಯ ಮೂಲಕ ಕಲಾತ್ಮಕ ಮೆಚ್ಚುಗೆ ಗಳಿಸುತ್ತದೆ. ಹೃದಯದ ಆರೋಗ್ಯ, ರೋಗನಿರೋಧಕ ಶಕ್ತಿ, ಮೂಳೆಗಳ ಆರೋಗ್ಯ, ದೇಹದ ತೂಕದ ನಿರ್ವಹಣೆ, ಒತ್ತಡ ಮತ್ತು ಖಿನ್ನತೆಯ ಕಡಿತ, ಆತ್ಮವಿಶ್ವಾಸದ ಹೆಚ್ಚಳ, ಸಕಾರಾತ್ಮಕ ಚಿಂತನೆ, ಸಾಮಾಜಿಕ ಮತ್ತು ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ, ಶಿಸ್ತು ಪಾಲನೆಯ ಗುಣವನ್ನು ಕಲಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಷ್ಟೇ ಕ್ರೀಡೆಗೂ ಮಹತ್ವ ನೀಡುವ ಮೂಲಕ ಯಶಸ್ಸನ್ನು ಪಡೆಯಬಹುದು ಎಂದು ತಿಳಿಸಿದರು.
ಉಪಾಧ್ಯಕ್ಷ ಬಿ.ಎನ್.ಸುರೇಶ್, ಗೌರವ ಕಾರ್ಯದರ್ಶಿ ಬಿ.ಎಸ್.ಯೋಗೇಂದ್ರ, ದೀಪಕ್‌ಕುಮಾರ್ ಜೈನ್, ಪ್ರಾಂಶುಪಾಲೆ ವಿಮಲಾ, ಮುಖ್ಯಶಿಕ್ಷಕಿ ಲಕ್ಷ್ಮೀ, ತರಬೇತುದಾರ ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಇದ್ದರು.